ಬಿಜೆಪಿ ನಾಯಕರನ್ನು ತಡೆಯಲೆತ್ನಿಸುವ ಸಿಎಂ ಮಮತಾ ಪರಿಣಾಮ ಎದುರಿಸಲಿದ್ದಾರೆ: ಅಮಿತ್​ ಷಾ

ಆಲಿಘಡ(ಉತ್ತರ ಪ್ರದೇಶ): ಪಶ್ಚಿಮ ಬಂಗಾಳವನ್ನು ಪ್ರವೇಶಿಸುವ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರನ್ನು ತಡೆಯುವ ಪ್ರಯತ್ನ ಮಾಡುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಕ್ರಮಕ್ಕೆ ಮುಂದಿನ ದಿನಗಳಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಮಮತಾ ದಿಗಿಲುಗೊಂಡಿದ್ದಾರೆ
ಬುಧವಾರ ಆಲಿಘಡದಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಖ್ಯಾತಿ ದಿನದಿಂದ ದಿನ ಬೆಳೆಯುತ್ತಿದ್ದು, ಇದರಿಂದ ಮಮತಾ ಅವರು ದಿಗಿಲುಗೊಂಡಿದ್ದಾರೆ. ಇದೊಂದೇ ಕಾರಣದಿಂದ ತಮ್ಮ ರಾಜ್ಯಕ್ಕೆ ಪ್ರವೇಶಿಸುವ ಬಿಜೆಪಿ ನಾಯಕರನ್ನು ತಡೆಯುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಕಮಲವನ್ನು ಅರಳಿಸುವವರೆಗೂ ವಿಶ್ರಾಂತಿಯಿಲ್ಲ
ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿರುವ 43 ಲೋಕಸಭಾ ಸ್ಥಾನಗಳಲ್ಲಿ 23ರಲ್ಲಿ ಗೆಲುವು ಸಾಧಿಸಿ ಕಮಲವನ್ನು ಅರಳಿಸುವವರೆಗೂ ಬಿಜೆಪಿ ಕಾರ್ಯಕರ್ತರು ಹಾಗೂ ನಾನು ವಿಶ್ರಾಂತಿಯನ್ನು ಪಡೆಯುವುದಿಲ್ಲ ಎಂಬುದನ್ನು ಮಮತಾ ಅವರು ತಿಳಿದಿಲ್ಲ ಎಂದು ಹೇಳಿದರು.

ಶಿವರಾಜ್​ಸಿಂಗ್​ ಚೌಹಾಣ್​ ಅವರಿಗೂ ಯೋಗಿ ಪರಿಸ್ಥಿತಿ
ನಿನ್ನೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್​ ಅವರಿದ್ದ ಹೆಲಿಕಾಪ್ಟರ್​ ಅನ್ನು ಲ್ಯಾಂಡ್​ ಮಾಡಲು ಮಮತಾ ಸರ್ಕಾರ ಅನುಮತಿ ನೀಡಲಿಲ್ಲ. ಹೀಗಾಗಿ ಯೋಗಿ ಅವರು ಜಾರ್ಖಂಡ್​ನಲ್ಲಿ ಇಳಿದು ರಸ್ತೆ ಮಾರ್ಗವಾಗಿ ಪುರುಲಿಯಾದಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಯೋಗಿ ಅವರಿಗೆ ಆದ ಪರಿಸ್ಥಿತಿಯೇ ಇಂದು ಮಧ್ಯ ಪ್ರದೇಶ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ಶಿವರಾಜ್​ಸಿಂಗ್​ ಚೌಹಾಣ್​ ಅವರಿಗೂ ಆಗಿದೆ. ಇದನೆಲ್ಲಾ ನೋಡಿದರೆ, ನನ್ನ ಸಮಯ ಮುಗಿದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸಲಿದೆ ಎಂಬುದು ಅವರಿಗೆ ಅರ್ಥವಾದಂತಿದೆ ಎಂದು ಷಾ ತಿಳಿಸಿದರು.

ಅವರದ್ದು ಒಂದು ಪಾತ್ರವಿರಬಹುದು
ಸಿಬಿಐ ಕ್ರಮದ ವಿರುದ್ಧ ಧರಣಿ ಕುಳಿತ ಮಮತಾ ನಡೆಯನ್ನು ಕುರಿತು ಮಾತನಾಡಿದ ಷಾ, ಪೊಲೀಸ್​ ಆಯುಕ್ತರನ್ನು ರಕ್ಷಿಸಲು ಅವರೇಕೆ ಪ್ರಯತ್ನಿಸಿದರು? ಇದನ್ನು ನೋಡಿದರೆ ಹಗರಣದ ಹಿಂದೆ ಅವರದ್ದು ಒಂದು ಪಾತ್ರವಿರಬಹುದು ಎಂದು ನನಗನಿಸುತ್ತಿದೆ ಎಂದು ಹೇಳಿದರು.

ಸೇಡು ತೀರಿಸಿಕೊಳ್ಳುತ್ತೇವೆ
ಪಶ್ಚಿಮ ಬಂಗಾಳ ರಾಜ್ಯಾದ್ಯಂತ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದುವರೆಗೂ 65 ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲಾಗಿದೆ. ಇದನ್ನು ತಿಳಿದು ನಾವು ಸುಮ್ಮನೇ ಕುಳಿತಿಲ್ಲ. ಆದರೆ, ನಮಗೆ ಶಾಂತಿ ಕದಡಲು ಇಷ್ಟವಿಲ್ಲ. ಯಾವಾಗ ಜನರು ನಮಗೆ ಮತ ನೀಡಿ ಗೆಲ್ಲಿಸುತ್ತಾರೆ ಆಗ ನಾವು ಇದಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ ಎಂದರು.

ಭಾರತ ಸುರಕ್ಷಿತ ದೇಶ
ಕೇಂದ್ರದಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಭಾರತ ಸುರಕ್ಷಿತ ದೇಶ ಎಂದು ಕರೆಸಿಕೊಳ್ಳುತ್ತಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರಕ್ಕೆ ಮತ ಹಾಕಿ ಎಂದು ಷಾ ಮನವಿ ಮಾಡಿದರು. (ಏಜೆನ್ಸೀಸ್​)