ಮಮತಾ ಬ್ಯಾನರ್ಜಿ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ: ಯೋಗಿ ಆದಿತ್ಯಾನಾಥ್​

ಪುರುಲಿಯಾ(ಪಶ್ಚಿಮ ಬಂಗಾಳ): ಶಾರದಾ ಚಿಟ್​ ಫಂಡ್​ ಹಗರಣದ ಹಿಂದಿರುವ ಭ್ರಷ್ಟ ಅಧಿಕಾರಿಗಳನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಕ್ಷಣೆ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್​ ಅವರು ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಪುರುಲಿಯಾದಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟ ಅಧಿಕಾರಿಗಳ ಮನೆಗೆ ಮಮತಾ ಅವರು ಹೋಗಿರುವುದು ಹಗರಣದಲ್ಲಿ ಮತ್ತಷ್ಟು ರಹಸ್ಯಗಳಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರು ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್​ ಇದೀಗ ಸರಿಯಾದ ತನಿಖೆಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.

ಚಿಟ್​ ಫಂಡ್​ ಹಗರಣ ಸಂಬಂಧ ಕೋಲ್ಕತ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ಅವರ ವಿಚಾರಣೆಗೆ ಆಗಮಿಸಿದ್ದ ಸಿಬಿಐ ಅಧಿಕಾರಿಗಳ ಕ್ರಮವನ್ನು ರಾಜಕೀಯ ದ್ವೇಷ ಎಂದು ಹೇಳಿ ಕೇಂದ್ರದ ವಿರುದ್ಧ ಧರಣಿ ಕುಳಿತಿದ್ದ ಮಮತಾ ಅವರ ಕ್ರಮವನ್ನು ಯೋಗಿ ವಿರೋಧಿಸಿದರು.

ಕೋಲ್ಕತ ಪೊಲೀಸ್​ ಆಯುಕ್ತ ಮನೆಗೆ ಭೇಟಿ ನೀಡಿದ ಮಮತಾ ಅವರ ಕ್ರಮವನ್ನು ವಿರೋಧಿಸಿದ ಯೋಗಿ ಅವರು, ಭ್ರಷ್ಟ ಅಧಿಕಾರಿಗಳ ಮನೆಯಲ್ಲೇಕೆ ಕುಳಿತುಕೊಂಡಿರಿ? ಇದರರ್ಥ ಶಾರದಾ ಚಿಟ್​ ಫಂಡ್​ ಹಗರಣದ ಹಿಂದೆ ಸಾಕಷ್ಟು ರಹಸ್ಯಗಳು ಇವೆ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿದರು.

ಯೋಗಿ ಅವರು ಉತ್ತರ ಪ್ರದೇಶದ ಬಗ್ಗೆ ಮಾತ್ರ ಗಮನ ಕೊಡಲಿ, ಅವರ ರಾಜ್ಯದಲ್ಲಿ ಗುಂಪು ಹಲ್ಲೆ ಹಾಗೂ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ ಎಂಬ ಮಮತಾ ಸಲಹೆಗೆ ಉತ್ತರ ಪ್ರದೇಶವನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ ಎಂದು ಯೋಗಿ ಪ್ರತ್ಯುತ್ತರ ನೀಡಿದರು.

ಇದಕ್ಕೂ ಮುಂಚೆ ಯೋಗಿ ಅವರು ಜಾರ್ಖಂಡ್​ನಿಂದ ರಸ್ತೆ ಮಾರ್ಗವಾಗಿ ಸಮಾವೇಶ ನಡೆದ ಪುರುಲಿಯಾಗೆ ತಲುಪಿದರು. ನಾಲ್ಕು ಗಂಟೆ ತಡವಾಗಿ ಆಗಮಿಸಿದ್ದಕ್ಕೆ ಮಮತಾ ಅವರ ಸರ್ಕಾರ ಯೋಗಿ ಅವರಿದ್ದ ಹೆಲಿಕಾಪ್ಟರ್​ ಲ್ಯಾಂಡ್​ ಮಾಡಲು ಮತ್ತೆ ಅನುಮತಿ ನೀಡಲಿಲ್ಲ. ಇದೇ ಕಾರಣದಿಂದಾಗಿ 50 ಕಿ.ಮೀ. ರಸ್ತೆ ಮಾರ್ಗವಾಗಿ ಪ್ರಯಾಣಿಸಬೇಕಾಯಿತು ಎಂದು ಬಿಜೆಪಿ ಹೇಳಿದೆ. (ಏಜೆನ್ಸೀಸ್​)