ಬಂಗಾಳದಲ್ಲಿ ಯೋಗಿ ಗರ್ಜನೆ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರ ರ್ಯಾಲಿಗೆ ತಡೆಯೊಡ್ಡಲು ಶತಾಯಗತಾಯ ಯತ್ನಿಸುತ್ತಿರುವ ಸಿಎಂ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆದಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಮಂಗಳವಾರ ಪುರುಲಿಯಾದಲ್ಲಿ ಭರ್ಜರಿ ರ‍್ಯಾಲಿ ನಡೆಸಿದ್ದಾರೆ.

ಮಮತಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಸಿಎಂ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಟಿಎಂಸಿ ಗೂಂಡಾಗಳು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಿಬಿಐ ವಿಚಾರವಾಗಿ ಕೇಂದ್ರ ಸರ್ಕಾರ ವಿರುದ್ಧ ಮಮತಾ ಪ್ರತಿಭಟನೆ ನಡೆಸಿದ ಕುರಿತು ಕಿಡಿಕಾರಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಅತ್ಯಂತ ನಾಚಿಕೆಗೇಡಿನ ವಿಷಯ ಎಂದರೆ ಮುಖ್ಯಮಂತ್ರಿಯೇ ಧರಣಿಗೆ ಕುಳಿತುಕೊಳ್ಳುವುದು. ಅದು ಕೂಡ ಚಿಂಟ್​ಫಂಡ್ ಹಗರಣ ಆರೋಪಿ ಎನ್ನಲಾಗಿರುವ ಅಧಿಕಾರಿಯ ರಕ್ಷಣೆಗಾಗಿ’ ಎಂದು ವಾಗ್ದಾಳಿ ನಡೆಸಿದರು.

ದೀದಿಗೆ ಯೋಗಿ ತಿರುಗೇಟು
ದಕ್ಷಿಣ ಮಿಡ್ನಾಪುರದಲ್ಲಿ ಭಾನುವಾರ ಸಿಎಂ ಯೋಗಿ ಅವರ ಹೆಲಿಕಾಪ್ಟರ್ ಇಳಿಸಲು ಮಮತಾ ಸರ್ಕಾರ ಅನುಮತಿ ನೀಡದೆ ಸತಾಯಿಸಿತ್ತು. ಕೊನೆಗೆ ದೂರವಾಣಿ ಮುಖಾಂತರ ರ್ಯಾಲಿಯನ್ನು ಉದ್ದೇಶಿಸಿ ಯೋಗಿ ಮಾತನಾಡಿದ್ದರು. ಎರಡು ಬಾರಿ ಯೋಗಿ ಹೆಲಿಕಾಪ್ಟರ್ ಇಳಿಸಲು ಸರ್ಕಾರ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಯೋಗಿ ಆದಿತ್ಯನಾಥ ಜಾರ್ಖಂಡ್​ನ ಬೊಕಾರೊದಲ್ಲಿ ಹೆಲಿಕಾಪ್ಟರ್ ಇಳಿಸಿ ನಂತರ ಕಾರಿನಲ್ಲಿ ಪಶ್ಚಿಮ ಬಂಗಾಳದ ಪುರುಲಿಯಾಗೆ ತೆರಳಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣ ಮಾಡಿದರು. ಮಂಗಳವಾರ ಮುಶಿದಾಬಾದ್​ನಲ್ಲಿ ರ್ಯಾಲಿಗಾಗಿ ಹೆಲಿಕಾಪ್ಟರ್ ಇಳಿಸಲು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್​ಗೆ ಮಮತಾ ಸರ್ಕಾರ ಅನುಮತಿ ನಿರಾಕರಿಸಿತ್ತು. ಜ.21ಕ್ಕೆ ರ್ಯಾಲಿಗಾಗಿ ಆಗಮಿಸಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೆಲಿಕಾಪ್ಟರ್ ಇಳಿಸಲು ಕೂಡ ಮಮತಾ ಸರ್ಕಾರ ಅನುಮತಿ ನೀಡಿರಲಿಲ್ಲ.

ಮೂರು ಕೋಟಿ ರೂ. ರಹಸ್ಯದ ಪತ್ರ!
ಬಿಜೆಪಿಗೆ ತಿರುಗೇಟು ನೀಡಲು ಪಣತೊಟ್ಟಿರುವ ಸಿಎಂ ಮಮತಾ, 2013ರಲ್ಲಿ ಶಾರದಾ ಚಿಟ್ ಫಂಡ್ ಮುಖ್ಯಸ್ಥ ಸುದೀಪ್ತೊ ಸೇನ್ ಬರೆದ ಪತ್ರವೊಂದನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಈಶಾನ್ಯ ರಾಜ್ಯಗಳ ಉಸ್ತುವಾರಿ ವಹಿಸಿರುವ ಬಿಜೆಪಿ ನಾಯಕ ಹಾಗೂ ಅಸ್ಸಾಂನ ಸಚಿವ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಸೇನ್ ಆರೋಪ ಮಾಡಿರುವ ಪತ್ರವಿದು. ಆಗ ಹಿಮಂತ್ ಬಿಸ್ವಾ ಟಿಎಂಸಿಯಲ್ಲಿದ್ದರು. ಒಂದೂವರೆ ವರ್ಷಗಳಲ್ಲಿ ಹಿಮಂತ್ ನನಗೆ 3 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಂಚಿಸಿದ್ದಾರೆ ಎಂದು ಸೇನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಚಿಟ್ ಫಂಡ್ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳುತ್ತಿದ್ದಂತೆ ಹಿಮಂತ್ ಬಿಸ್ವಾ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಕ್ರಮಕ್ಕೆ ಕೇಂದ್ರ ಸೂಚನೆ
ಸಿಬಿಐ ಮತ್ತು ಮಮತಾ ವಿರುದ್ಧದ ತಿಕ್ಕಾಟದ ಕೇಂದ್ರಬಿಂದುವಾಗಿರುವ ಕೋಲ್ಕತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ. ಅಖಿಲ ಭಾರತ ಸೇವೆಗಳ ನಿಯಮ ಉಲ್ಲಂಘನೆ (ಸಿಎಂ ಹಾಗೂ ರಾಜಕೀಯ ನಾಯಕರ ಜತೆಗೆ ಧರಣಿಗೆ ಕುಳಿತಿದ್ದು ) ಮತ್ತು ಅಶಿಸ್ತಿನ ವರ್ತನೆ ಆರೋಪದ ಮೇಲೆ ರಾಜೀವ್ ವಿರುದ್ಧ ಕ್ರಮ ಜರುಗಿಸುವಂತೆ ಸಚಿವಾಲಯ ಪತ್ರದಲ್ಲಿ ಹೇಳಿದೆ.

ನಾಯ್ಡು ಸಾಥ್
ಧರಣಿ ನಿರತ ಮಮತಾರನ್ನು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಂಗಳವಾರ ಭೇಟಿಯಾಗಿ ಬೆಂಬಲ ಸೂಚಿಸಿದರು. ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಡಿಎಂಕೆ ನಾಯಕಿ ಕನಿಮೊಳಿ ಕೂಡ ಮಮತಾರನ್ನು ಭೇಟಿಯಾಗಿದ್ದರು.

ಇಂದು ಟಿಎಂಸಿ ವಿರುದ್ಧ ಕೈ ರ್ಯಾಲಿ?
ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಎಲ್ಲ ವಿಪಕ್ಷಗಳ ಜತೆಗೆ ಸಾಗುವುದು ನಮ್ಮ ನಿಲುವು. ಆದರೆ ರಾಜ್ಯ ಮಟ್ಟದಲ್ಲಿ ಬಿಜೆಪಿ, ಟಿಎಂಸಿ ನಮಗೆ ಎದುರಾಳಿಗಳು. ಚಿಟ್​ಫಂಡ್ ಹಗರಣದ ತನಿಖೆ ಶೀಘ್ರ ಮುಗಿಸುವಂತೆ ಆಗ್ರಹಿಸಿ ಬುಧವಾರ ನಾವು ರ‍್ಯಾಲಿ ನಡೆಸಲಿದ್ದೇವೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಸೋಮೇಂದ್ರ ನಾಥ್ ಮಿತ್ರಾ ಹೇಳಿದ್ದಾರೆ. 14 ಕಾಂಗ್ರೆಸ್ ಶಾಸಕರನ್ನು ಮತ್ತು ಒಬ್ಬ ಸಂಸದೆಯನ್ನು ಟಿಎಂಸಿ ಪಕ್ಷಕ್ಕೆ ಸೇರಿಕೊಳ್ಳಲು ಒತ್ತಡ ಹೇರಿದೆ. ಇಂಥವರೊಂದಿಗೆ ನಾವು ಹೇಗೆ ಕೈಜೋಡಿಸುವುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಟ್ವೀಟಿಗರ ಶ್ಲಾಘನೆ
ಬೊಕಾರೊದಿಂದ ಪುರುಲಿಯಾ 53.2 ಕಿ.ಮೀ. ದೂರದಲ್ಲಿದೆ. ಹೆಲಿಕಾಪ್ಟರ್ ಇಳಿಸಲು ಯೋಗಿ ಆದಿತ್ಯನಾಥ ಬಿಜೆಪಿ ಆಡಳಿತವಿರುವ ಜಾರ್ಖಂಡ್​ನ ಗಡಿಪ್ರದೇಶದ ನಗರವನ್ನು ಆಯ್ಕೆ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಹಠಮಾರಿತನದ ವಿರುದ್ಧ ಚಾಣಾಕ್ಷ ನಡೆ ಎಂದು ಟ್ವೀಟಿಗರು ಶ್ಲಾಘಿಸಿದ್ದಾರೆ.

ಮಮತಾ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ, ಅಸಾಂವಿಧಾನಿಕ ಕೃತ್ಯಗಳಲ್ಲಿ ತೊಡಗಿಕೊಂಡಿದೆ. ಹಾಗಾಗಿ ನನ್ನಂಥ ಒಬ್ಬ ಸನ್ಯಾಸಿ, ಯೋಗಿಗೆ ಬಂಗಾಳದ ಮಣ್ಣನ್ನು ತುಳಿಯಲು ಅವಕಾಶ ನೀಡುತ್ತಿಲ್ಲ.

| ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿ