ಎಕ್ಸ್​ಪೈರಿ ಪಿಎಂರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ಮಮತಾ ಬ್ಯಾನರ್ಜಿ

ಬಿಷ್ಣುಪುರ್​: ಪಶ್ಚಿಮ ಬಂಗಾಳದಲ್ಲಿ ಫೊನಿ ಚಂಡಮಾರುತದಿಂದ ಆದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಲಾಗಿದ್ದರೂ ಅವರು ಉತ್ತರಿಸಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನರೇಂದ್ರ ಮೋದಿಯವರು ಮಮತಾ ಬ್ಯಾನರ್ಜಿಯವರು ಚಂಡಮಾರುತ ಪರಿಹಾರ ವಿಚಾರದಲ್ಲೂ ರಾಜಕೀಯದಾಟ ಆಡುತ್ತಿದ್ದಾರೆ. ಅವರಿಗೆ ಅಹಂಕಾರ ಎಂದು ಇಂದು ಬೆಳಗ್ಗೆ ಹೇಳಿದ್ದರು.

ಈಗ ಮೋದಿಯವರಿಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ನಾನು ಕೋಲ್ಕತ್ತ ಸಮೀಪದ ಕರಗ್​ಪುರದಲ್ಲಿ ಇದ್ದೆ. ಅಲ್ಲಿ ಫೊನಿ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ವಿಚಾರಿಸುತ್ತಿದ್ದೆ. ಹಾಗಾಗಿ ಮೋದಿಯವರ ಕರೆ ತೆಗೆದುಕೊಳ್ಳಲಿಲ್ಲ ಎಂದಿದ್ದರು.

ಅಲ್ಲದೆ, ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ತಮ್ಲುಕ್​ನಲ್ಲಿ ಮೋದಿ ರ‍್ಯಾಲಿಯಿತ್ತು. ಆಗ ಕೂಡ ಮಮತಾ ಬ್ಯಾನರ್ಜಿ ಮೋದಿಯವರನ್ನು ಭೇಟಿಯಾಗಿ ಚಂಡಮಾರುತದ ಹಾನಿ, ಪರಿಹಾರದ ವಿಚಾರವಾಗಿ ಚರ್ಚಿಸಲಿಲ್ಲ. ಈ ಬಗ್ಗೆ ನಂತರ ಮಮತಾ ಬ್ಯಾನರ್ಜಿ ನರೇಂದ್ರ ಮೋದಿಯವರ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಲೋಕಸಭೆ ಚುನಾವಣೆಗಳು ನಡೆಯುತ್ತಿದ್ದು ಪ್ರಧಾನಿಯಾಗಿ ಮೋದಿಯವರ ಅವಧಿ ಮುಕ್ತಾಯಗೊಂಡಿದೆ. ಅವಧಿ ಮುಗಿದ ಪ್ರಧಾನಿಯ ಜತೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.
ಇಂದು ಬೆಳಗ್ಗೆ ಮೋದಿಯವರು ತಮ್ಲುಕ್​ನಲ್ಲಿ ಮಾತನಾಡುತ್ತ, ನನಗೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಬೇಸರವಾಗುತ್ತಿದೆ. ಈ ಬಗ್ಗೆ ಮಾತನಾಡಲು ದೀದಿಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ನಾನು ಕಾದೆ. ಅವರೂ ತಿರುಗಿ ಕರೆ ಮಾಡಲಿಲ್ಲ ಎಂದು ಹೇಳಿದ್ದರು.

ನರೇಂದ್ರ ಮೋದಿಯವರು ಇಂದು ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಜತೆ ಅಲ್ಲಿ ಚಂಡಮಾರುತದಿಂದ ಆದ ಹಾನಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದರು. ಪಶ್ಚಿಮ ಬಂಗಾಳದಲ್ಲೂ ಸಮೀಕ್ಷೆ ನಡೆಸಲು ಅವರು ನಿರ್ಧರಿಸಿದ್ದರೂ ಇಲ್ಲಿನ ಮಮತಾ ಬ್ಯಾನರ್ಜಿ ಸರ್ಕಾರ ಅದನ್ನು ನಿರಾಕರಿಸಿತ್ತು. ಅಲ್ಲದೆ ಚುನಾವಣೆ ಪ್ರಚಾರ ಸಭೆಗಳು ಇವೆ ಎಂಬ ನೆಪವೊಡ್ಡಿ ಹಾನಿ ಸಮೀಕ್ಷೆ ಬೇಡ ಎಂದು ಹೇಳಿತ್ತು.