ಜೀವ ಬಿಡಲು ಸಿದ್ಧ ಆದರೆ ರಾಜಿ ಆಗುವ ಮಾತೇ ಇಲ್ಲ: ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ: ನಾನು ನನ್ನ ಜೀವವನ್ನು ಬಿಡಲು ಸಿದ್ಧವಾಗಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬಿಐ ಪ್ರವೇಶದ ವಿರುದ್ಧ ಧರಣಿ ಕುಳಿತಿರುವ ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್​ ಇಲಾಖೆಯನ್ನು ಮುನ್ನಡೆಸುವ ಪೊಲೀಸ್​ ಆಯುಕ್ತರ ಸ್ಥಾನವನ್ನು ಅವಮಾನಿಸುವ ಪ್ರಯತ್ನ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಈ ನಡೆಯೇ ನನ್ನ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಿದರು.

ನಾನು ಪ್ರಾಣವನ್ನು ಬೇಕಾದರೂ ಬಿಡುತ್ತೇನೆ. ಆದರೆ, ರಾಜಿ ಮಾಡಿಕೊಳ್ಳುವುದಿಲ್ಲ. ಟಿಎಂಸಿ ನಾಯಕರನ್ನು ತನಿಖೆ ನಡೆಸಿದಾಗ ನಾನು ಬೀದಿಗೆ ಇಳಿದಿರಲಿಲ್ಲ. ಆದರೆ, ಯಾವಾಗ ಅವರು ಕೋಲ್ಕತ ಪೊಲೀಸ್​ ಆಯುಕ್ತರ ಸ್ಥಾನಕ್ಕೆ ಅಪಮಾನ ಎಸಗಲು ಪ್ರಯತ್ನಿಸಿದರೋ ಅದೇ ನನ್ನ ಕೋಪಕ್ಕೆ ಕಾರಣವಾಯಿತು ಎಂದು ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕುಳಿತಿರುವುದನ್ನು ಸಮರ್ಥಿಸಿಕೊಂಡರು.

ಚಿಟ್​ ಫಂಡ್​ ಹಗರಣದ ಆರೋಪದ ಹಿನ್ನೆಲೆಯಲ್ಲಿ ಕೋಲ್ಕತ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್ ಅವರನ್ನು ವಿಚಾರಣೆ ನಡೆಸಲು ಸಿಬಿಐ ಭಾನುವಾರ ಕೋಲ್ಕತಾಗೆ ಆಗಮಿಸಿತ್ತು. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ, ಸಂವಿಧಾನ ಹಾಗೂ ದೇಶವನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಪ್ರತಿಭಟಿಸುತ್ತಿರುವ ಸಿಎಂ ಮಮತಾ ಅವರ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. (ಏಜೆನ್ಸೀಸ್​)