ಪ್ರಧಾನಿ ಭೇಟಿಗೂ ಮುನ್ನಾ ದಿನವೇ ಮೋದಿ ಪತ್ನಿ ಜಶೋಧಾಬೆನ್‌ರನ್ನು ಭೇಟಿ ಮಾಡಿದ ದೀದಿ, ಕೆರಳಿದ ಕುತೂಹಲ

ಕೋಲ್ಕತ: ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ನವದೆಹಲಿಗೆ ವಿಮಾನ ಹತ್ತುವ ಮುನ್ನ ಕೋಲ್ಕತ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಂಡತಿಯನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು.

ನೆರೆಯ ಜಾರ್ಖಂಡ್‌ನ ಧನ್‌ಬಾದ್‌ ಭೇಟಿಗೆ ತೆರಳಿದ್ದ ಮೋದಿ ಪತ್ನಿ ಜಶೋದಾಬೆನ್ ಎರಡು ದಿನಗಳ ಬಳಿಕ ಅಲ್ಲಿಂದ ತೆರಳುತ್ತಿದ್ದರು. ಈ ವೇಳೆ ಕೋಲ್ಕತಗೆ ಬಂದಿಳಿದಿದ್ದ ಅವರನ್ನು ದೆಹಲಿಗೆ ಹೊರಟಿದ್ದ ಮಮತಾ ಬ್ಯಾನರ್ಜಿ ಭೇಟಿ ಮಾಡಿದ್ದಾರೆ.

ಪರಸ್ಪರ ಭೇಟಿಯಾದ ಇಬ್ಬರು ಉಭಯ ಕುಶಲೋಪರಿಯನ್ನು ವಿಚಾರಿಸಿಕೊಂಡರು. ಈ ವೇಳೆ ಮುಖ್ಯಮಂತ್ರಿ ಮಮತಾ, ಜಶೋದಾಬೆನ್‌ ಅವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಸಂಜೆ 4.30ರ ವೇಳೆಗೆ ಮಮತಾ ಮೋದಿಯವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿದ್ದು, ಉಭಯ ನಾಯಕರು ರಾಜ್ಯ ಮತ್ತು ಕೇಂದ್ರದ ಸಂಬಂಧ ಮತ್ತು ಅನುದಾನ ಸೇರಿ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸುವ ಕುರಿತು ಚರ್ಚಿಸಲಿದ್ದಾರೆ.

ಜಶೋಧಾಬೆನ್‌ ಅವರು ಸೋಮವಾರವಷ್ಟೇ ಪಶ್ಚಿಮ ಬಂಗಾಳದ ಬರ್ಧಮಾನ್‌ ಜಿಲ್ಲೆಯ ಅಸನ್ಸೋಲ್‌ನ ಕಲ್ಯಾಣೇಶ್ವರಿ ದೇಗುಲದಲ್ಲಿ ಪೂಜೆಯನ್ನು ಸಲ್ಲಿಸಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *