ಕೋಲ್ಕತ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯ ತನಿಖೆ ಬಿರುಸಿನಿಂದ ನಡೆಯುತ್ತಿದ್ದು, ಪ್ರಕರಣವನ್ನು ನ್ಯಾಯಾಲಯ ಈಗಾಗಲೇ ಸಿಬಿಐ ಅಧಿಕಾರಿಗಳಿಗೆ ವಹಿಸಿದೆ. ಅದರಂತೆಯೇ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಬಿಐ, ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾನನ್ನು ಬಂಧಿಸಿ, ವಿಚಾರಣೆ ಕೈಗೊಂಡಿದೆ. ಆದ್ರೆ, ಇದ್ಯಾವುದಕ್ಕೂ ಸುಮ್ಮನಾಗದ ಕಿರಿಯ ಹಾಗೂ ಹಿರಿಯ ವೈದ್ಯರು ತಮ್ಮ ಪ್ರತಿಭಟನೆಯನ್ನು ಎಂದಿನಂತೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಅರಣ್ಯ ನಾಶದಿಂದಲೇ ಕಾಡಾನೆಗಳ ಹಾವಳಿ
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೃತ ಟ್ರೈನಿ ವೈದ್ಯೆಯ ಪೋಷಕರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದೇ ಆದರೂ ನ್ಯಾಯಕ್ಕಾಗಿ ಪ್ರತಿಭಟನೆ ಕೈಗೊಂಡಿರುವ ಡಾಕ್ಟರ್ಗಳು ಮಾತ್ರ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೂ ನಾವು ನಮ್ಮ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳ ಮಾತಿಗೆ ಕಿಂಚಿತ್ತು ಬಗ್ಗದ ವೈದ್ಯರು ತಮ್ಮ ಕರ್ತವ್ಯಕ್ಕೆ ಹಿಂತಿರುಗಲು ಇಚ್ಛಿಸುತ್ತಿಲ್ಲ. ಸದ್ಯ ಇದು ರಾಜ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಿದೆ.
ಕೆಲವು ದಿನಗಳಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಮತ್ತು ವೈದ್ಯರ ನಡುವೆ ಶೀತಲ ಸಮರ ನಡೆಯುತ್ತಿದೆ. ಪ್ರತಿಭಟನೆ ಕೈಬಿಡದ ಡಾಕ್ಟರ್ಸ್ ಒಂದೆಡೆಯಾದರೆ, ವೈದ್ಯರಿಲ್ಲದೆ ಆಸ್ಪತ್ರೆಯ ಮುಂದೆ ಪರದಾಡುತ್ತಿರುವ ಸಾವಿರಾರು ರೋಗಿಗಳು ಮತ್ತೊಂದೆಡೆ. ಈ ಸಮಸ್ಯೆಯನ್ನು ಬಗೆಹರಿಸಲು ತಾವೇ ಅಖಾಡಕ್ಕಿಳಿದಿರುವ ಸಿಎಂ, ಖುದ್ದಾಗಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ಕೊಟ್ಟು ವೈದ್ಯರಿಗೆ ಕಡೆಯ ಬಾರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ತಾಜ್ ಮಹಲ್ ಮುಖ್ಯ ಗುಮ್ಮಟದಿಂದ ನೀರು ಸೋರಿಕೆ! ಕಾರಣವೇನು ಗೊತ್ತಾ?
ಬ್ಯಾನರ್ಜಿ ಆಗಮಿಸುತ್ತಿದ್ದಂತೆ ಧಿಕ್ಕಾರ ಘೋಷಣೆಗಳನ್ನು ಕೂಗಲು ಶುರುಮಾಡಿದ ಪ್ರತಿಭಟನಾನಿರತ ವೈದ್ಯರು, ಸಿಎಂ ಮಾತನ್ನು ಆಲಿಸಲು ಆಸಕ್ತಿ ತೋರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸದ ಮಮತಾ, “ದಯವಿಟ್ಟು ಐದು ನಿಮಿಷ ನನ್ನ ಮಾತು ಕೇಳಿ, ಆನಂತರ ಏನಾದರೂ ಕೂಗಾಡಿ. ನನ್ನ ಭದ್ರತಾ ಪಡೆ ಎಚ್ಚರಿಕೆ ನೀಡಿದ್ದರೂ ಸಹ ನಾನೇ ಖುದ್ದಾಗಿ ಇಲ್ಲಿಗೆ ಬಂದು ನಿಮ್ಮ ಹೋರಾಟಕ್ಕೆ ಸಲಾಂ ಹೇಳುತ್ತಿದ್ದೇನೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸುತ್ತೇವೆ. ನೀವು ಬಳಲುತ್ತಿದ್ದೀರಿ, ದಯಮಾಡಿ ಇದನ್ನೆಲ್ಲಾ ಇಲ್ಲಿಗೆ ಕೈಬಿಡಿ. ನಿಮ್ಮ ಕರ್ತವ್ಯಕ್ಕೆ ಹಿಂತಿರುಗಿ, ನ್ಯಾಯ ಒದಗಿಸಿಕೊಡುವಲ್ಲಿ ನಾವು ಬದ್ಧರಾಗಿದ್ದೇವೆ. ನನಗೆ ನೀವೇ ಮುಖ್ಯ” ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).
ಆ ದೃಶ್ಯ ಕಂಡು ಮಾಹಿಯಿಂದ ದೂರ ಇದ್ದೆವು! ಕ್ಯಾಪ್ಟನ್ ‘ಕೂಲ್’ ಅಲ್ಲವೇ ಅಲ್ಲ ಎಂದ ಸುಬ್ರಮಣ್ಯಂ ಬದ್ರಿನಾಥ್