ಧರಣಿ ಅಂತ್ಯಗೊಳಿಸಿದ ಸಿಎಂ ಮಮತಾ ಬ್ಯಾನರ್ಜಿ : ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲು ನಿರ್ಧಾರ

ಕೋಲ್ಕತ: ಶಾರದಾ ಚಿಟ್​ ಫಂಡ್​ ಹಗರಣ ಸಂಬಂಧ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ವಿಚಾರಣೆಗೆ ಆಗಮಿಸಿದ್ದ ಸಿಬಿಐ ಕ್ರಮವನ್ನು ಖಂಡಿಸಿ ಕೇಂದ್ರದ ವಿರುದ್ಧ ಧರಣಿ ಕುಳಿತಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಭಟನೆ ಇಂದು(ಮಂಗಳವಾರ) ಅಂತ್ಯವಾಗಿದೆ. ಕಳೆದ ಮೂರು ದಿನಗಳಿಂದ ಸಿಬಿಐ ಹಾಗೂ ಪೊಲೀಸ್​ ನಡುವಿನ ಗುದ್ದಾಟದೊಂದಿಗೆ ನಗರ ಪೊಲೀಸ್​ ಆಯುಕ್ತರನ್ನು ಬೆಂಬಲಿಸಿ ಧರಣಿಗೆ ಕುಳಿತ್ತಿದ್ದ ಮಮತಾ ಅವರ ನಡೆಯಿಂದಾಗಿ ಕೋಲ್ಕತವೂ ದೇಶದ ರಾಜಕೀಯ ರಾಜಧಾನಿಯಾಗಿ ಬದಲಾಗಿತ್ತು.

ವಿವಿಧ ನಾಯಕರ ಮನವಿಯ ಮೇರೆಗೆ ಇಂದು ಧರಣಿಯನ್ನು ಕೊನೆಗೊಳಿಸಿದ ಮಮತಾ ಅವರು ನಮ್ಮ ಹೋರಾಟವನ್ನು ನಾವು ಇಲ್ಲಿಗೆ ನಿಲ್ಲಿಸುವುದಿಲ್ಲ. ಇದನ್ನು ದೆಹಲಿಯವರೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ವೇದಿಕೆಯ ಮೇಲೆ ಘೋಷಣೆ ಕೂಗಿದರು. ಈ ವೇಳೆ ಆಂಧ್ರ ಪ್ರದೇಶದ ಸಿಎಂ ಎನ್​. ಚಂದ್ರಬಾಬು ನಾಯ್ಡು ಅವರು ಮಮತಾ ಅವರಿಗೆ ಧ್ವನಿಗೂಡಿಸಿದರು.

ಸಿಬಿಐ ಹಾಗೂ ಕೋಲ್ಕತ ಪೊಲೀಸ್ ಸಂಘರ್ಷ ಪ್ರಕರಣ​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಇಂದು ನಡೆದ ವಿಚಾರಣೆಯಲ್ಲಿ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್​ ಅವರನ್ನು ಸಿಬಿಐ ವಿಚಾರಣೆಗೆ ಹಾಜರಾಗುವಂತೆಯೂ, ವಿಚಾರಣೆಗೆ ಹಾಜರಾಗುವವರೆಗೂ ಸಿಬಿಐ ಅವರನ್ನು ಬಂಧಿಸದಂತೆ ಕೋರ್ಟ್​ ತಟಸ್ಥ ತೀರ್ಪು ನೀಡಿತು. ಇದನ್ನು ಬಿಜೆಪಿ ಹಾಗೂ ಮಮತಾ ಅವರು ಇದೊಂದು ನೈತಿಕ ಜಯ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡರು.

ಸಿಎಂ ಮಮತಾ ಬ್ಯಾನರ್ಜಿ ಹಾಗೂ ಅವರನ್ನು ಬೆಂಬಲಿಸುವ ಇತರೆ ಪಕ್ಷದ ನಾಯಕರು ಫೆ. 12ರಂದು ದೆಹಲಿಯ ಜಂತರ್​ ಮಂತರ್​ ಮೈದಾನದಲ್ಲಿ ಪ್ರತಿಭಟನೆಗೆ ಕೂರುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ ಎಂಬ ಆರೋಪದೊಂದಿಗೆ ಧರಣಿಗೆ ಯೋಜನೆ ಹಾಕಿಕೊಂಡಿದ್ದಾರೆ.

ಮಮತಾ ಅವರು ಧರಣಿಯನ್ನು ನಿಲ್ಲಿಸಬೇಕು. ಶರಾದ್​​ ಪವಾರ್​, ಅರವಿಂದ್​ ಕೇಜ್ರಿವಾಲ್​ ಮತ್ತು ಶರದ್​ ಯಾದವ್​ ಮುಂತಾದವರೊಂದಿಗೆ ನಾನು ಮಾತನಾಡಿದ್ದೇವೆ. ಎಲ್ಲರೂ ಸೇರಿ ಈ ವಿಚಾರವನ್ನು ದೆಹಲಿಗೆ ತೆಗೆದುಕೊಂಡು ಹೋಗೋಣ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಮತಾ ಅವರಿಗೆ ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು.

ಚಿಟ್​ ಫಂಡ್​ ಹಗರಣದ ಆರೋಪದ ಹಿನ್ನೆಲೆಯಲ್ಲಿ ಕೋಲ್ಕತ ಪೊಲೀಸ್​ ಆಯುಕ್ತ ರಾಜೀವ್​ ಕುಮಾರ್ ಅವರನ್ನು ವಿಚಾರಣೆ ನಡೆಸಲು ಸಿಬಿಐ ಭಾನುವಾರ ಕೋಲ್ಕತಾಗೆ ಆಗಮಿಸಿತ್ತು. ಈ ವೇಳೆ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತ ಪೊಲೀಸರು ವಶಕ್ಕೆ ಪಡೆದಿದ್ದರು. ಸಿಬಿಐ ಕ್ರಮದ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ, ಸಂವಿಧಾನ ಹಾಗೂ ದೇಶವನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಭಾನುವಾರ ರಾತ್ರಿಯಿಂದಲೇ ಸಿಎಂ ಮಮತಾ ಅವರ ಧರಣಿ ಕುಳಿತ್ತಿದ್ದರು. (ಏಜೆನ್ಸೀಸ್​)