ನಿಮ್ಮ ದಾದಾಗಿರಿಯನ್ನು ದೆಹಲಿಗೆ ತರಬೇಡಿ: ದೀದಿ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ವ್ಯಂಗ್ಯದ ಪೋಸ್ಟರ್​ಗಳು

ನವದೆಹಲಿ: ಇಂದು ಆಮ್​ ಆದ್ಮಿ ಪಾರ್ಟಿ ಆಯೋಜಿಸಿರುವ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ಮಮತಾ ಬ್ಯಾನರ್ಜಿ ಅವರ ಕ್ಯಾರಿಕೇಚರ್​ಗಳ ಪೋಸ್ಟರ್​ಗಳು ಎಲ್ಲೆಡೆ ರಾರಾಜಿಸುತ್ತಿವೆ. ಆದರೆ ಹೊಗಳಿ ಹಾಕಿದ್ದಂತೂ ಖಂಡಿತ ಅಲ್ಲ.

ಇತ್ತೀಚೆಗೆ ಮಮತಾ ಬ್ಯಾನರ್ಜಿಯವರು ತಮ್ಮ ರಾಜ್ಯದಲ್ಲಿ ಸೃಷ್ಟಿಸಿದ್ದ ನಾಟಕೀಯ ಬೆಳವಣಿಗೆಗಳನ್ನು ವ್ಯಂಗ್ಯವಾಡುವ ಮಾದರಿಯಲ್ಲಿ ಈ ಪೋಸ್ಟರ್​ಗಳು ಇವೆ.

ಮಮತಾ ಕೋಪಗೊಂಡಿರುವ ರೀತಿಯಲ್ಲಿ ಚಿತ್ರಿಸಲಾಗಿದ್ದು, ಅದರೊಂದಿಗೆ, ದೀದಿ ನೀವು ದೆಹಲಿಯಲ್ಲಿನ ಪ್ರಜಾಪ್ರಭುತ್ವವನ್ನು ಆನಂದಿಸಿ. ನಿಮ್ಮ ಬಂಗಾಳಕ್ಕಿಂತ ಇಲ್ಲಿನ ಪ್ರಜಾಪ್ರಭುತ್ವ ಭಿನ್ನವಾಗಿದೆ ಎಂದು ಬರೆಯಲಾಗಿದೆ. ಅಲ್ಲದೆ “ದೀದಿ, ಗಣರಾಜ್ಯ ಭಾರತಕ್ಕೆ ನಿಮ್ಮನ್ನು ಸಂತೋಷದಿಂದ ಸ್ವಾಗತಿಸುತ್ತೇವೆ, ದಯವಿಟ್ಟು ನಿಮ್ಮ ದಾದಾಗಿರಿಯನ್ನು ದೆಹಲಿಗೆ ತರಬೇಡಿ. ರಿಲ್ಯಾಕ್ಸ್​ ದೀದಿ, ನಾವೆಲ್ಲ ದೆಹಲಿಯಲ್ಲಿ ಸುರಕ್ಷಿತವಾಗಿದ್ದೇವೆ. ಇದು ಪ್ರಜಾಪ್ರಭುತ್ವ,” ಎಂದು ಹಿಂದಿ, ಇಂಗ್ಲಿಷ್​​ಗಳಲ್ಲಿ ಬರೆದಂಥ ಮೂರು ಮಾದರಿಯ ಪೋಸ್ಟರ್​ಗಳನ್ನು ಅಲ್ಲಲ್ಲಿ ಹಾಕಲಾಗಿದೆ. ಈ ಎಲ್ಲ ಪೋಸ್ಟರ್​ಗಳ ಕೆಳಗೆ ‘ಯುವ ಪ್ರಜಾಪ್ರಭುತ್ವ ಉಳಿಸಿ’ ಸಂಘಟನೆಯ ಹೆಸರು ಇದೆ.

ಇತ್ತೀಚೆಗೆ ಮಮತಾ ಬ್ಯಾನರ್ಜಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಗುದ್ದಾಟ ನಡೆಯುತ್ತಿದೆ. ಸಿಬಿಐ ತನಿಖೆಯನ್ನೇ ವಿರೋಧಿಸಿ ಮಮತಾ ಧರಣಿ ಕುಳಿತಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಮಮತಾ ದೀದಿ ರಾಷ್ಟ್ರದ ಗಮನ ಸೆಳೆದಿದ್ದರು.