ಕಮಲ-ತೃಣಮೂಲ ಕೆಸರೆರಚಾಟ: ರೋಡ್​ಶೋ ಹಿಂಸಾಚಾರದ ಸುತ್ತ ರಾಜಕೀಯ

ಕೋಲ್ಕತ/ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರೋಡ್​ಶೋ ಬಳಿಕ ಕೋಲ್ಕತದಲ್ಲಿ ನಡೆದ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಕಲಹಕ್ಕೆ ಕಾರಣವಾಗಿದೆ. ಕೊನೆಯ ಹಂತದ ಚುನಾವಣೆಗೂ ಮುನ್ನ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ರಾಜಕೀಯ ಕಿತ್ತಾಟ ತಾರಕಕ್ಕೇರಿದೆ.

ಇನ್ನೊಂದೆಡೆ ಚಿಂತಕ ಈಶ್ವರಚಂದ್ರ ವಿದ್ಯಾಸಾಗರರ ಪ್ರತಿಮೆ ಭಗ್ನವಾಗಿರುವುದು ‘ಬಂಗಾಳ ಅಸ್ಮಿತೆ’ಗೆ ಧಕ್ಕೆಯಾಗಿದೆ ಎಂಬ ಹೊಸ ರಾಜಕೀಯ ವ್ಯಾಖ್ಯಾನ ಆರಂಭವಾಗಿದೆ. ಈಶ್ವರಚಂದ್ರರ ಪ್ರತಿಮೆ ಭಗ್ನವಾಗಲು ಬಿಜೆಪಿ ಕಾರಣ ಎಂದು ಟಿಎಂಸಿ ಆರೋಪಿಸಿದ್ದರೆ, ತೃಣಮೂಲ ಗೂಂಡಾಗಳು ಪ್ರತಿಮೆ ವಿರೂಪಗೊಳಿಸಿ ಷಡ್ಯಂತ್ರ ರೂಪಿಸಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ. ವಿವಾದವು ರಾಷ್ಟ್ರ ರಾಜಧಾನಿಯನ್ನು ತಲುಪಿದ್ದು, ಬಿಜೆಪಿ ಹಾಗೂ ಟಿಎಂಸಿ ನಿಯೋಗಗಳು ಪ್ರತ್ಯೇಕವಾಗಿ ಚುನಾವಣಾ ಆಯೋಗದ ಬಾಗಿಲು ತಟ್ಟಿದ್ದು, ಪರಸ್ಪರ ಕ್ರಮಕ್ಕೆ ಆಗ್ರಹಿಸಿವೆ.

ಏತನ್ಮಧ್ಯೆ ಹಿಂಸಾಚಾರ, ಕಲ್ಲು ತೂರಾಟ ಹಾಗೂ ಪ್ರತಿಮೆ ಭಗ್ನವಾಗಲು ಯಾರು ಕಾರಣ ಎನ್ನುವ ಬಗ್ಗೆ ಬಿಜೆಪಿ ಹಾಗೂ ಟಿಎಂಸಿ ಮುಖಂಡರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿದ್ಯಾಸಾಗರ ಕಾಲೇಜಿನ ವಿದ್ಯಾರ್ಥಿಗಳು ಬಿಜೆಪಿ ರೋಡ್​ಶೋನತ್ತ ಕಲ್ಲು ಎಸೆದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎನ್ನುವುದು ಬಿಜೆಪಿ ವಾದವಾಗಿದೆ. ಆದರೆ ಇದನ್ನು ಅಲ್ಲಗಳೆದಿರುವ ಟಿಎಂಸಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ. ಬಳಿಕ ಕಾಲೇಜಿನೊಳಗೆ ನುಗ್ಗಿ ದಾಂಧಲೆ ಮಾಡಿ ಈಶ್ವರಚಂದ್ರ ವಿದ್ಯಾಸಾಗರ್ ಪ್ರತಿಮೆ ಭಗ್ನಗೊಳಿಸಿದ್ದಾರೆ ಎಂದು ಆರೋಪಿಸಿದೆ. ಪ್ರತಿಮೆಯ ಮೇಲೆ ಒಂದು ಸಿಸಿಟಿವಿ ಇದ್ದು, ಅದರಲ್ಲಿನ ವಿಡಿಯೋ ಇನ್ನೂ ಬಹಿರಂಗವಾಗಿಲ್ಲ. ಆ ವಿಡಿಯೋ ಸಾರ್ವಜನಿಕವಾದರೆ ಸತ್ಯ ಹೊರಬೀಳಲಿದೆ ಎಂದು ಸಿಪಿಐ-ಎಂ ಅಭಿಪ್ರಾಯಪಟ್ಟಿದೆ.

ಮಮತಾ ಪಾದಯಾತ್ರೆ

ಈಶ್ವರಚಂದ್ರ ವಿದ್ಯಾಸಾಗರ್ ಪ್ರತಿಮೆ ಭಗ್ನ ಮಾಡಿರುವುದನ್ನು ಖಂಡಿಸಿ ಮಮತಾ ಬ್ಯಾನರ್ಜಿ ಕೋಲ್ಕತದಲ್ಲಿ ಗುರುವಾರ ಪಾದಯಾತ್ರೆ ನಡೆಸಿದರು. ವಿದ್ಯಾಸಾಗರ್ ಅವರ ಚಿತ್ರವಿರುವ ಟೀಶರ್ಟ್ ಧರಿಸಿದ ಕಾರ್ಯಕರ್ತರೊಂದಿಗೆ ಮಮತಾ ಹೆಜ್ಜೆ ಹಾಕಿ, ‘ಬಂಗಾಳ ಅಸ್ಮಿತೆ’ ಮೂಲಕ ರಾಜಕೀಯ ಮೈಲೇಜು ಪಡೆಯಲು ಯತ್ನಿಸಿದರು. ಇದಲ್ಲದೇ ಮಮತಾ ಬ್ಯಾನರ್ಜಿ ಸೇರಿ ತೃಣಮೂಲ ಕಾಂಗ್ರೆಸ್​ನ ಎಲ್ಲ ನಾಯಕರು ಸಾಮಾಜಿಕ ಜಾಲತಾಣಗಳ ಮುಖಚಿತ್ರಗಳಲ್ಲಿ ವಿದ್ಯಾಸಾಗರ್ ಭಾವಚಿತ್ರ ಹಾಕಿಕೊಂಡು ಪ್ರತಿಭಟಿಸಿದ್ದಾರೆ.

80 ಮಂದಿ ಬಂಧನ

ಹಿಂಸಾಚಾರ ಹಾಗೂ ಪ್ರತಿಮೆ ಭಗ್ನಕ್ಕೆ ಸಂಬಂಧಿಸಿ ಅಂದಾಜು 80 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಬಹುತೇಕರು ಅಕ್ಕಪಕ್ಕದ ರಾಜ್ಯದ ಬಿಜೆಪಿ ಕಾರ್ಯಕರ್ತರು ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೇರಿಕ್ ಒಬ್ರಾಯನ್ ಆರೋಪಿಸಿದ್ದಾರೆ. ಏತನ್ಮಧ್ಯೆ ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಬಿಜೆಪಿ ಐಟಿ ಸೆಲ್​ನ ತಿಜಿಂದರ್ ಬಗ್ಗಾ ಅವರನ್ನು ಮಧ್ಯರಾತ್ರಿ ಬಂಧಿಸಿರುವ ಪೊಲೀಸರು, ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದರು ಎಂದು ಬಿಜೆಪಿ ಆರೋಪಿಸಿದೆ. ಘಟನೆಗೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದ್ದು, ನ್ಯಾಯಸಮ್ಮತ ಚುನಾವಣೆ ನಡೆಸಲು ಕ್ರಮಕೈಗೊಳ್ಳಲು ಆಗ್ರಹಿಸಿದೆ. ಆಯೋಗ ಕೂಡ ರಾಜ್ಯ ಚುನಾವಣಾಧಿಕಾರಿಗಳಿಂದ ವಿಸõತ ವರದಿ ಪಡೆದುಕೊಂಡಿದೆ.

ಯಾವುದೇ ರಾಜ್ಯದಲ್ಲಿ ಚುನಾವಣಾ ಹಿಂಸೆ ನಡೆಯುತ್ತಿಲ್ಲ. ಬಂಗಾಳದಲ್ಲಿ ಮಾತ್ರ ನಡೆಯುತ್ತಿದೆ ಎಂದರೆ ಅದಕ್ಕೆ ಮಮತಾ ಹತಾಶೆಯೇ ಕಾರಣ. ರೋಡ್​ಶೋ ವೇಳೆ ಸಿಆರ್​ಪಿಎಫ್ ಸಿಬ್ಬಂದಿ ಹಾಜರಿರದಿದ್ದರೆ ನಾನು ಜೀವಂತವಾಗಿ ಅಲ್ಲಿಂದ ಹೊರಬರಲು ಕೂಡ ಆಗುತ್ತಿರಲಿಲ್ಲ.ಯೋಗಿ ಆದಿತ್ಯನಾಥ್ ವಿರುದ್ಧ ಕ್ರಮಕೈಗೊಳ್ಳುವ ಆಯೋಗ, ಮಮತಾ ಬ್ಯಾನರ್ಜಿ ಭಾಷಣ ಆಲಿಸಿ ಏಕೆ ಕ್ರಮ ಕೈಗೊಳ್ಳುವುದಿಲ್ಲ.

| ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಬಂಗಾಳದ ಯಾವುದೇ ವ್ಯಕ್ತಿ ವಿದ್ಯಾಸಾಗರರ ಪ್ರತಿಮೆ ಭಗ್ನಗೊಳಿಸುವ ಧೈರ್ಯ ಮಾಡುವುದಿಲ್ಲ. ಅವರ ವ್ಯಕ್ತಿತ್ವದ ಪರಿಚಯವಿಲ್ಲದ ಪಕ್ಕದ ರಾಜ್ಯದ ಬಿಜೆಪಿ ಗೂಂಡಾಗಳು ಈ ಕೃತ್ಯ ನಡೆಸಿದ್ದಾರೆ.

| ಡೇರಿಕ್ ಒಬ್ರಾಯನ್ ಟಿಎಂಸಿ ರಾಜ್ಯಸಭಾ ಸದಸ್ಯ

ಕಾಶ್ಮೀರಕ್ಕಿಂತ ಭೀಕರ ಎಂದ ಮೋದಿ

 • ಪಶ್ಚಿಮ ಬಂಗಾಳಕ್ಕಿಂತ ಜಮ್ಮು-ಕಾಶ್ಮೀರದಲ್ಲೇ ಶಾಂತಿಯುತ ಚುನಾವಣೆ ನಡೆದಿದೆ.
 • ನನ್ನ ಮೇಲಿನ ದ್ವೇಷವನ್ನು ಬಿಜೆಪಿ ಕಾರ್ಯಕರ್ತರು ಹಾಗೂ ರಾಜ್ಯದ ಜನತೆ ಮೇಲೆ ಟಿಎಂಸಿ ಸರ್ಕಾರ, ಕಾರ್ಯಕರ್ತರು ತೋರುತ್ತಿದ್ದಾರೆ.
 • ಈ ಹಿಂದೆ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಕೊಲೆ ಹಾಗೂ ಬೆದರಿಕೆ ಪ್ರಕರಣ ನಡೆದಿದ್ದವು.
 • ನನ್ನ ಸಮಾವೇಶಗಳಿಗೆ ಹಿಂದಿನ ದಿನ ರಾತ್ರಿವರೆಗೂ ಅನುಮತಿ ದೊರೆಯುತ್ತಿಲ್ಲ.
 • ಮಮತಾ ಬ್ಯಾನರ್ಜಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಬುದ್ಧಿಜೀವಿಗಳು, ಪ್ರಜಾಪ್ರಭುತ್ವದ ನಕಲಿ ಹೋರಾಟಗಾರರಿಗೆ ಇದು ಕಾಣಿಸುತ್ತಿಲ್ಲ.
 • ಬಿಜೆಪಿಯನ್ನು ಬೆದರಿಸುವ ಯತ್ನದಲ್ಲಿ ರಾಜ್ಯದ ಜನತೆ ವಿರುದ್ಧ ಮಮತಾ ದ್ವೇಷ ಸಾಧಿಸುತ್ತಿದ್ದಾರೆ. ಫಲಿತಾಂಶ ಹಾಗೂ ತನ್ನದೇ ನೆರಳು ನೋಡಿ ಮಮತಾ ಹೆದರುತ್ತಿದ್ದಾರೆ.
 • ಬಿಜೆಪಿ ವಿರುದ್ಧ ಪ್ರತಿಕಾರ ಪಡೆಯುತ್ತೇನೆ ಎಂದು ಘೋಷಿಸಿದ್ದ 24 ಗಂಟೆಯೊಳಗೆ ರೋಡ್​ಶೋನಲ್ಲಿ ಹಿಂಸಾಚಾರ ಮಾಡಿಸಿ ಹೇಳಿದ್ದನ್ನು ಮಮತಾ ಮಾಡಿ ತೋರಿಸಿದ್ದಾರೆ.

ಸುಪ್ರೀಂ ಕೋರ್ಟ್ ಗರಂ

ಮಮತಾ ಬ್ಯಾನರ್ಜಿ ಮೆಮೆ ಪೋಸ್ಟ್ ಮಾಡಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡದಿದ್ದ ಪಶ್ಚಿಮ ಬಂಗಾಳ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶವ್ಯಕ್ತಪಡಿಸಿದೆ. ಕೋರ್ಟ್ ಆದೇಶವನ್ನು ಪಾಲಿಸದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ. ಸ್ಥಳೀಯ ಪೊಲೀಸರು ಸ್ವಚ್ಛಂದವಾಗಿ ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ. ಇದನ್ನು ಕೋರ್ಟ್ ಸಹಿಸುವುದಿಲ್ಲ ಎಂದು ನ್ಯಾಯಪೀಠ ಎಚ್ಚರಿಸಿದೆ. ಏತನ್ಮಧ್ಯೆ ಪೊಲೀಸರು ಹಾಗೂ ಜೈಲಧಿಕಾರಿಗಳು ಮಾನಸಿಕ ಹಿಂಸೆ ಹಾಗೂ ಬೆದರಿಕೆ ನೀಡಿದ್ದಾರೆ ಎಂದು ಪ್ರಿಯಾಂಕಾ ಪರ ವಕೀಲರು ಆರೋಪಿಸಿ 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಜು.2ಕ್ಕೆ ಅರ್ಜಿ ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿಸಿದೆ.

ಮೆಮೆ ಉಡುಗೊರೆ ಸವಾಲು!

ಮಮತಾ ಬ್ಯಾನರ್ಜಿ ಅವರ ಮೆಮೆ ಪೋಸ್ಟ್ ಮಾಡಿದ್ದಕ್ಕೆ ಜೈಲಿಗೆ ಅಟ್ಟಿರುವ ಪ್ರಕರಣವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೊಸ ಸವಾಲು ಹಾಕಿದ್ದಾರೆ. ‘ಮೇ 23ರ ನಂತರ ನಡೆಯಲಿರುವ ನನ್ನ ಪ್ರಮಾಣವಚನ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ನನಗೆ ವಿಶೇಷ ಉಡುಗೊರೆ ನೀಡಬೇಕು. ಖುದ್ದು ಚಿತ್ರ ಕಲಾವಿದೆಯಾಗಿರುವ ಮಮತಾ, ನನ್ನನ್ನು ಕೆಟ್ಟದಾಗಿ ಮೆಮೆ ಮಾಡಿ ಉಡುಗೊರೆ ನೀಡಲಿ. ಆದರೆ ನಾನು ಅವರ ವಿರುದ್ಧ ದೂರು ನೀಡಿ, ಎಫ್​ಐಆರ್ ಹಾಕಿಸಿ, ಜೈಲಿಗೆ ಕಳುಹಿಸುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಬಂಗಾಳದ ಯುವತಿಯನ್ನು ಜೈಲಿಗೆ ಕಳುಹಿಸಿ ಮಹಿಳೆಯರಿಗೆ ಟಿಎಂಸಿ ಸರ್ಕಾರ ಅವಮಾನ ಮಾಡಿದೆ ಎಂದು ಮೋದಿ ಆರೋಪಿಸಿದ್ದಾರೆ.

ಘಟನಾವಳಿ

 • ಮಂಗಳವಾರ ರಾತ್ರಿ ಕೋಲ್ಕತದಲ್ಲಿ ಹಿಂಸಾಚಾರ, ಈಶ್ವರಚಂದ್ರ ವಿದ್ಯಾಸಾಗರ್ ಪ್ರತಿಮೆ ಭಗ್ನ.
 • ಹಿಂಸಾಚಾರ ಕುರಿತು ಬಿಜೆಪಿ, ಟಿಎಂಸಿ ಪರಸ್ಪರ ಆರೋಪ.
 • ಕೋಲ್ಕತದಲ್ಲಿ ಬಿಜೆಪಿ, ಟಿಎಂಸಿ ಹಾಗೂ ಎಡಪಕ್ಷಗಳ ಪ್ರತಿಭಟನೆ.
 • ಕೇಂದ್ರ ಸಚಿವರ ನೇತೃತ್ವದಲ್ಲಿ ಬಿಜೆಪಿಯಿಂದ ದೆಹಲಿಯಲ್ಲಿ ಮೌನ ಪ್ರತಿಭಟನೆ
 • ಚುನಾವಣಾ ಆಯೋಗಕ್ಕೆ ಪ್ರತ್ಯೇಕ ದೂರು ನೀಡಿದ ಬಿಜೆಪಿ, ಟಿಎಂಸಿ ನಿಯೋಗ
 • ಕೋಲ್ಕತದಲ್ಲಿ ಮಮತಾ ಬ್ಯಾನರ್ಜಿ ಪಾದಯಾತ್ರೆ.
 • ಕೋಲ್ಕತ ಹತ್ತಿರವೇ ಎರಡು ಪ್ರತ್ಯೇಕ ಪ್ರಚಾರ ಸಭೆ ನಡೆಸಿದ ಮೋದಿ.

ದೇಶದಲ್ಲಿ ಪ್ರಧಾನಿ ಮೋದಿಯವರ ಅಲೆ ಹೆಚ್ಚಾಗಿರುವುದನ್ನು ಸಹಿಸಲಾಗದೇ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಮೇ 23ಕ್ಕೆ ಹೊರಬೀಳುವ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ದೇಶದ ಜನರು ಟಿಎಂಸಿಗೆ ತಕ್ಕ ಪಾಠ ಕಲಿಸುತ್ತಾರೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಬಹಿರಂಗ ಪ್ರಚಾರಕ್ಕೆ ತಡೆ

ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಸ್ಥಿತಿ ಹಾಗೂ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ, ಗುರುವಾರ ರಾತ್ರಿ 10ರಿಂದ ಬಹಿರಂಗ ಪ್ರಚಾರಕ್ಕೆ ನಿಷೇಧ ಹೇರಿದೆ. ಸಾಮಾನ್ಯವಾಗಿ 48 ಗಂಟೆ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದರೆ, ಬಂಗಾಳದ 9 ಕ್ಷೇತ್ರಗಳ ವ್ಯಾಪ್ತಿಯಲ್ಲಿ 72 ಗಂಟೆಗೆ ಮುನ್ನವೇ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ. ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದು ಹಾಗೂ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಇಲ್ಲದಿರುವುದು ಈ ಆದೇಶಕ್ಕೆ ಕಾರಣ ಎಂದು ಚುನಾವಣಾ ಆಯೋಗ ತಿಳಿಸಿದೆ. ‘ಆಯೋಗವು ಬೇಸರದಿಂದ ವಿಶೇಷ ಅಧಿಕಾರ ಬಳಸಿ ಪ್ರಚಾರಕ್ಕೆ ನಿರ್ಬಂಧ ಹೇರುತ್ತಿದೆ’ ಎಂದು ಸ್ಪಷ್ಟಪಡಿಸಿದೆ.

ಏತನ್ಮಧ್ಯೆ ಮಮತಾ ಬ್ಯಾನರ್ಜಿ ಆಪ್ತ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ವಿರುದ್ಧ ಆಯೋಗ ಮತ್ತೆ ಕೆಂಗಣ್ಣು ಬೀರಿದೆ. ಕೋಲ್ಕತ ಪೊಲೀಸ್ ಆಯುಕ್ತ ಹುದ್ದೆಯಿಂದ ಈ ಹಿಂದೆ ತೆಗೆದುಹಾಕಿದ್ದ ರಾಜೀವ್ ಅವರನ್ನು ಸಿಐಡಿ ಡಿಐಜಿ ಹುದ್ದೆಯಿಂದಲೂ ತೆಗೆದುಹಾಕಿದೆ. ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಆರೋಪದ ಮೇಲೆ ರಾಜ್ಯ ಸೇವೆಯಿಂದ ಹೊರ ಹಾಕಲಾಗಿದ್ದು, ಕೂಡಲೇ ಗೃಹ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಆಯೋಗ ಕಟ್ಟಪ್ಪಣೆ ಹೊರಡಿಸಿದೆ. ಇದಲ್ಲದೇ ರಾಜ್ಯ ಸರ್ಕಾರದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅತ್ರಿ ಭಟ್ಟಾಚಾರ್ಯ ಅವರನ್ನು ಕೂಡ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ.

ಚುನಾವಣಾ ಆಯೋಗ ಪಕ್ಷಪಾತದ ನಿರ್ಣಯ ಮಾಡಿದೆ. ಗುರುವಾರ ಮೋದಿಯ ಎರಡು ಪ್ರಚಾರ ಸಭೆ ಅಂತ್ಯವಾದ ಬಳಿಕ ನಿಷೇಧ ಹೇರಲಾಗಿದೆ.

| ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಸಿಎಂ

Leave a Reply

Your email address will not be published. Required fields are marked *