ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್​ ಆರ್​ಎಸ್​ಎಸ್​ ನೆರವು ಪಡೆದಿದೆ: ಸಿಎಂ ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತಾ: ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಲು ಕಾಂಗ್ರೆಸ್​, ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್​ಎಸ್​ಎಸ್​) ನೆರವನ್ನು ಪಡೆಯುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದು, ಅಪಾಯಕಾರಿಯಾಗಿರುವ ಕಾಂಗ್ರೆಸ್​, ಬಿಜೆಪಿ ಹಾಗೂ ಎಡರಂಗದ ಸಂಯೋಜನೆಯನ್ನು ಸೋಲಿಸಿ ಎಂದು ಜನರಿಗೆ ಕರೆ ನೀಡಿದ್ದಾರೆ.

ಸೋಮವಾರ ಮುಸ್ಲಿಂ ಸಮುದಾಯ ಹೆಚ್ಚಿರುವ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಾಂಗ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಮತಾ ಅವರು ಮಾಜಿ ರಾಷ್ಟ್ರಪತಿ ಪ್ರಣಾಬ್​ ಮುಖರ್ಜಿ ಅವರು 2018ರಲ್ಲಿ ನಾಗ್ಪುರದ ಆರ್​​ಎಸ್​ಎಸ್​ ಮುಖ್ಯಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನೆನಪಿಸಿ, ಪ್ರಣಬ್​ ಮುಖರ್ಜಿ ಅವರ ಮಗ ಹಾಗೂ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಅಭಿಜಿತ್​ ಮುಖರ್ಜಿ ಪರ ಆರ್​ಎಸ್​ಎಸ್​ ಪ್ರಚಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಪಂಡೋರ ಬಾಕ್ಸ್​(ಪುರಾಣದ ಪ್ರಕಾರ ಅನಿರೀಕ್ಷಿತ ತೊಂದರೆಗಳನ್ನು ಉಂಟುಮಾಡುವ ಮೂಲ) ತೆರೆಯಲು ನನ್ನನ್ನು ಒತ್ತಾಯಿಸಬೇಡಿ ಎಂದು ಕಿಚಾಯಿಸಿರುವ ಮಮತಾ ಅವರು ಕಾಂಗ್ರೆಸ್​ ಸಂಪೂರ್ಣ ಗೇಮ್​​ಪ್ಲ್ಯಾನ್​ ಈಗ ಬಹಿರಂಗವಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಹಾಗೂ ಎಡರಂಗದ ಸಹಾಯದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಬಹರಂಪೋರ್​ನ ಕಾಂಗ್ರೆಸ್​ ಅಭ್ಯರ್ಥಿ ಅಧಿರ್​ ಚೌಧರಿ ಅವರ ತಂತ್ರ ಈ ಬಾರಿ ಸಫಲವಾಗುವುದಿಲ್ಲ. ಸಂಶಯಾಸ್ಪದ ಪಾತ್ರವಿರುವ ಪಕ್ಷಗಳಿಗೆ ಜನರು ಮತ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.

ಬಹರಂಪೋರ್​ನ ಕಾಂಗ್ರೆಸ್​ ಅಭ್ಯರ್ಥಿ ಅಧಿರ್​ ಚೌಧರಿ ವಿರುದ್ಧ ಟಿಎಂಸಿ ಪಕ್ಷದಿಂದ ಕಣಕ್ಕಿಳಿದಿರುವ ಅಪುರ್ಬ ಸರ್ಕಾರ್​(ಡೇವಿಡ್​) ಅವರು ಈ ಹಿಂದೆ ಕಾಂಗ್ರೆಸ್​ನಲ್ಲಿದ್ದರು. ಅವರನ್ನು ಪಕ್ಷದಿಂದ ವಜಾಮಾಡಿದ ಬಳಿಕ ಟಿಎಂಸಿಗೆ ಸೇರಿದ್ದರು.

ಜಂಗೀಪುರದಲ್ಲಿ ಅಭಿಜಿತ್​ ಮುಖರ್ಜಿ ಹಾಗೂ ಬಹರಂಪೋರದಲ್ಲಿ ಅಧೀರ್​ ಚೌದರಿ ಪರ ಆರ್​ಆರ್​ಎಸ್​ ಪ್ರಚಾರ ಮಾಡುತ್ತಿದೆ. ಸಿಪಿಐ(ಎಂ) ಈಗಾಗಲೇ ಬಿಜೆಪಿಗೆ ಮಾರಾಟವಾಗಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್​, ಬಿಜೆಪಿ ಹಾಗೂ ಎಡರಂಗಗಳು ಮಾಡುವ ತಂತ್ರಗಾರಿಕೆ ನಡೆಯಲ್ಲ. ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲೂ ಟಿಎಂಸಿ ಅಭೂತಪೂರ್ವ ಗೆಲುವು ದಾಖಲಿಸಲಿದೆ ಎಂದು ಮಮತಾ ಅವರು ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *