ಬಿಜೆಪಿ ವಿರುದ್ಧದ ಮಹಾ ಮೈತ್ರಿ ಕೂಟಕ್ಕೆ ಕಾಶ್ಮೀರದ ಅಬ್ದುಲ್ಲಾ ಬೆಂಬಲ; ಬಿಜೆಪಿ ಬಗ್ಗೆ ಅವರು ಹೇಳಿದ್ದೇನು?

ಹೌರಾ( ಪಶ್ಚಿಮ ಬಂಗಾಳ): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ರಾಷ್ಟ್ರದ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಒಗ್ಗೂಡಬೇಕಿದೆ ಎಂದು ಜಮ್ಮು ಕಾಶ್ಮೀರದ ನ್ಯಾಷನಲ್​ ಕಾನ್ಫರೆನ್ಸ್​ ಮುಖ್ಯಸ್ಥ ಒಮರ್​ ಅಬ್ದುಲ್ಲ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಸದ್ಯದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ, ಅಲ್ಪಸಂಖ್ಯಾತರಲ್ಲಿ ಮನೆ ಮಾಡಿರುವ ಅಭದ್ರತೆ ಭಾವ ಮತ್ತು ಇಂದಿನ ಸನ್ನಿವೇಶದಲ್ಲಿ ಮೈತ್ರಿಯ ಅನಿವಾರ್ಯತೆ ಕುರಿತು ಅಬ್ದುಲ್ಲಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೌರಾದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ಇದೇ ವೇಳೆ, ” ದೇಶದ ಪ್ರಾದೇಶಿಕ ಪಕ್ಷಗಳೆಲ್ಲವೂ ಒಂದಾಗುತ್ತಿರುವ ಈ ಮೈತ್ರಿ ಕೂಟದಲ್ಲಿ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಮ್ಮತಕ್ಕೆ ಬರಲು ಸಾಧ್ಯವೇ?” ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ಲಾ, ” ನಿಜವಾದ ಮೈತ್ರಿ ಕೂಟ ಒಗ್ಗಟ್ಟಾಗಿರುತ್ತದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ,” ಎಂದು ಹೇಳಿದರು.

“ವಿಭಿನ್ನ ರಾಜ್ಯಗಳು, ಪ್ರಾಂತ್ಯಗಳ ವಿಭಿನ್ನ ಪರಿಸ್ಥಿಗೆ ಅನುಗುಣವಾಗಿ ಪ್ರಾದೇಶಿಕ ಪಕ್ಷಗಳು ತಮ್ಮ ನಾಯಕತ್ವವನ್ನು ಕಂಡುಕೊಂಡಿವೆ. ಉದಾಹರಣೆಗೆ ನಾನು ಮುನ್ನಡೆಸುತ್ತಿರುವ ಪಕ್ಷಕ್ಕೂ, ಮಮತಾ ಬ್ಯಾನರ್ಜಿ ಅವರು ಮುನ್ನಡೆಸುತ್ತಿರುವ ಪಕ್ಷಕ್ಕೂ ಪ್ರಾದೇಶಿಕವಾಗಿ ಪರಿಸ್ಥಿತಿಗಳು ಬೇರೆಯದ್ದೇ ಇವೆ. ಹೀಗಾಗಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಮುಂದಿನ ದಿನಗಳಲ್ಲಿ ನಾವು ಒಗ್ಗಟ್ಟಾಗಬೇಕಿದೆ. ಮತ್ತಷ್ಟು ಪಕ್ಷಗಳು ಮೈತ್ರಿ ಕೂಟ ಸೇರಬೇಕಾಗಿದೆ. ನಮ್ಮಲ್ಲಿನ ಭಿನ್ನಾಭಿಪ್ರಾಯಗಳೇನೇ ಇದ್ದರೂ ನಾವು ಒಂದು ಉದ್ದೇಶಕ್ಕಾಗಿ ಒಗ್ಗೂಡಬೇಕಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾಗಿದೆ,” ಎಂದು ಅಬ್ದುಲ್ಲಾ ಅಭಿಪ್ರಾಯಪಟ್ಟರು.