ಮಲ್ಪೆಗೆ ಬಾಂಬ್ ಬೆದರಿಕೆ ಯುವಕ ಸೆರೆ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಬಾಂಬ್ ಹಾಕುವುದಾಗಿ ಹೇಳಿಕೆ ನೀಡಿದ ಯುವಕನೊಬ್ಬನ ವಿಡಿಯೋ ಬೆನ್ನತ್ತಿದ ಪೊಲೀಸರು ತೊಟ್ಟಂ ಸೃಜನ್ ಪೂಜಾರಿ(18) ಎಂಬಾತನನ್ನು ಶನಿವಾರ ಬಂಧಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಾ ಮುಂದಿನ ಗುರಿ ಮಲ್ಪೆ, ಮಲ್ಪೆಯಲ್ಲಿ ಬಾಂಬ್ ಸ್ಫೋಟಿಸಲಾಗುವುದು. ಅಂಗಡಿಗಳೆಲ್ಲ ನಾಶವಾಗುತ್ತದೆ ನೋಡುತ್ತಿರಿ ಎಂದು ಯುವಕ ಮುಖಕ್ಕೆ ಬಟ್ಟೆ ಸುತ್ತಿಕೊಂಡು ವಿಡಿಯೋದಲ್ಲಿ ಹೇಳಿಕೆ ನೀಡಿದ್ದ. ಈ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ, ವಿಡಿಯೋ ತುಣುಕು ಆಧರಿಸಿ ಮಲ್ಪೆ ಠಾಣಾಧಿಕಾರಿ ಮಧು ಆರೋಪಿ ವಿರುದ್ಧ ಕಲಂ 153(ಎ), 505(2) ಐಪಿಪಿಯಂತೆ ಪ್ರಕರಣ ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಎಎಸ್‌ಪಿ ಕುಮಾರಚಂದ್ರ, ಡಿವೈಎಸ್‌ಪಿ ನೇತೃತ್ವದ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ನಿರ್ದೇಶನ ನೀಡಿದರು. ಅದರಂತೆ ಪೊಲೀಸರ ತಂಡ ವಿಡಿಯೋ ಹಬ್ಬಿಸಿದ ಒಬ್ಬೊಬ್ಬರ ವಿಚಾರಣೆ ನಡೆಸಿದ್ದಾರೆ. ಮಲ್ಪೆ ಬೀಚ್ ಪರಿಸರದಲ್ಲಿ ಅಂಗಡಿ ನಡೆಸುತ್ತಿದ್ದ ನೇಪಾಲ ಮೂಲದ ವ್ಯಕ್ತಿಯನ್ನು ವಿಚಾರಿಸಿದಾಗ ಈ ವಿಡಿಯೋ ನನಗೆ ಸೃಜನ್ ಎಂಬಾತ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾನೆ. ಅದರಂತೆ ಸೃಜನ್‌ನನ್ನು ತೊಟ್ಟಂ ಮನೆಯಲ್ಲಿ ವಶಕ್ಕೆ ಪಡೆದುಕೊಂಡ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದಾರೆ.

ಮನೆಯಲ್ಲಿ ಬಯ್ಯುತ್ತಿದ್ದಕ್ಕೆ ಕೃತ್ಯ!: ತಾನೇ ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾಗಿ ಯುವಕ ತಪ್ಪೊಪ್ಪಿಕೊಂಡಿದ್ದಾನೆ. ಮನೆಯಲ್ಲಿ ನನಗೆ ಯಾವಾಗಲೂ ಬೈಯುತ್ತಿರುತ್ತಾರೆ ಅದಕ್ಕೆ ಹೀಗೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಭಾರತ-ಪಾಕಿಸ್ತಾನ ಯುದ್ಧ ಭೀತಿ ವಾತಾವರಣದ ಲಾಭ ಪಡೆದು ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ವಿಡಿಯೋ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯುವಕನಿಂದ ಮೊಬೈಲ್, ಮುಖಕ್ಕೆ ಸುತ್ತಿಕೊಂಡಿದ್ದ ಟವೆಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯುವಕ ತಂದೆ, ತಾಯಿ, ಅಕ್ಕನೊಂದಿಗೆ ವಾಸವಿದ್ದು, ಕುರಿ ಸಾಕಾಣಿಕೆ ಕೆಲಸ ಮಾಡಿಕೊಂಡಿದ್ದ. ತಂದೆ ಪ್ಲಾಸ್ಟಿಕ್ ಅಂಗಡಿ ವ್ಯವಹಾರ ನಡೆಸುತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.