ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಶೋಭಾ

ಕಳಸ: ಐದು ವರ್ಷ ಕ್ಷೇತ್ರದಲ್ಲಿ ಸುಳಿದಾಡದ ಶೋಭಾ ಕರಂದ್ಲಾಜೆ ಈಗ ಮೋದಿಯ ಹೆಸರು ಹೇಳಿಕೊಂಡು ಮತಯಾಚನೆಗೆ ಹೊರಟಿದ್ದಾರೆ. ಟಿಕೆಟ್ ಬೇಕಾದಾಗ ಯಡಿಯೂರಪ್ಪ, ವೋಟು ಬೇಕಾದಾಗ ಮೋದಿಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಶೋಭಾ ಬೇಕೆ ಅಥವಾ ಕೆಲಸ ಮಾಡುವ ಮಧ್ವರಾಜ್ ಬೇಕೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವ್ವಾಜ್ ಪ್ರಶ್ನಿಸಿದರು.

ಗುರುವಾರ ಕಾಂಗ್ರೆಸ್, ಜೆಡಿಎಸ್, ಸಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆಯಂಥ ಗಂಭೀರ ಸಮಸ್ಯೆ, ಅಡಕೆ, ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಸಂಸದೆ ಜನರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ ಹಾಗೂ ಲೋಕಸಭೆಯಲ್ಲಿ ಧ್ವನಿಯೆತ್ತಲಿಲ್ಲ ಎಂದರು.

ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಮಾಡುವ ಇವರನ್ನು ಈ ಬಾರಿ ಬಿಜೆಪಿ ಕಾರ್ಯಕರ್ತರೇ ಗೋಬ್ಯಾಕ್ ಶೋಭಾ ಎಂದು ಹೇಳಿದ್ದಾರೆ. ಇಂಥವರನ್ನು ರಾಜಕೀಯದಿಂದ ದೂರ ಇಡಬೇಕು. ಮೋದಿ ಒಂದು ಬಾರಿ ಸರ್ಜಿಕಲ್ ದಾಳಿ ಮಾಡಿ ಅದನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಮನಮೋಹನ್ ಸಿಂಗ್ ಸರ್ಕಾರದ ಸಂದರ್ಭದಲ್ಲಿ ಹನ್ನೊಂದು ಬಾರಿ ಸರ್ಜಿಕಲ್ ದಾಳಿ ಆಗಿದೆ. ಅವರು ಎಂದಿಗೂ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲಿಲ್ಲ ಎಂದರು.

ನಾನು ಪ್ರಾಮಾಣಿಕವಾಗಿ ರಾಜಕಾರಣ ಮಾಡಿಯೂ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಸೋತಿದ್ದು ಒಳ್ಳೆಯದೆ ಆಯಿತು. ಆಗ ಗೆದ್ದಿದ್ದರೆ ಈಗ ಲೋಕಸಭೆಗೆ ಸ್ಪರ್ಧಿಸುವ ಅವಕಾಶ ಕೈತಪ್ಪುತ್ತಿತ್ತು ಎಂದರು.

ಎಂಎಲ್​ಸಿ ಮೋಟಮ್ಮ ಮಾತನಾಡಿ, ಶೋಭಾ ಕರಂದ್ಲಾಜೆ ಹೆಸರಿಗೆ ಮಾತ್ರ ಲೋಕಸಭಾ ಸದಸ್ಯೆಯಾಗಿ ಈಗ ಮತ್ತೆ ಮತ ಯಾಚನೆಗೆ ಬಂದಿದ್ದಾರೆ. ಪ್ರಧಾನಿ ಮೋದಿ ತಾವು ನೀಡಿದ ಭರವಸೆಯಂತೆ ಯಾವುದನ್ನೂ ಈಡೇರಿಸಿಲ್ಲ. ಅದನ್ನು ಪ್ರಶ್ನೆ ಮಾಡಬೇಕಾದ ಸಂದರ್ಭ ಇದಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಜಾತ್ಯತೀತ ರಾಷ್ಟ್ರವನ್ನು ಹಿಂದು ರಾಷ್ಟ್ರ ಮಾಡಲು ವಿಚಿತ್ರ ಶಕ್ತಿಗಳು ಒಟ್ಟಾಗಿವೆ. ಇಂತಹ ಸರ್ಕಾರದ ಅವಶ್ಯಕತೆ ನಮಗಿಲ್ಲ. ಕಳಸ ತಾಲೂಕು ಆಗಬೇಕು ಎನ್ನುವ 40 ವರ್ಷಗಳ ಬೇಡಿಕೆಗೆ ಯಾರೂ ಸ್ಪಂದಿಸಲಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ಅದನ್ನು ಈಡೇರಿಸಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಜೆಡಿಎಸ್ ಅಧ್ಯಕ್ಷ ಮಹಮ್ಮದ್ ರಫೀಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಕೆ.ಆರ್.ಪ್ರಭಾಕರ್, ರಾಜೇಂದ್ರ, ಗೋಪಾಲ ಶೆಟ್ಟಿ, ಎಚ್.ಡಿ.ಜ್ವಾಲನಯ್ಯ ಮತ್ತಿತರರಿದ್ದರು.

ನನ್ನನ್ನು ಹಿಂದು ವಿರೋಧಿ ಎನ್ನುತ್ತಾರೆ. ಆದರೆ ದೇವಸ್ಥಾನಗಳಿಗೆ ನಾನು ಕೊಟ್ಟಷ್ಟು ದೇಣಿಗೆಯನ್ನು ಹಿಂದುವಾದಿಗಳು ಎನಿಸಿಕೊಂಡವರು ಕೊಟ್ಟಿದ್ದಾರೆಯೇ? ನಾನು ನಿತ್ಯ ಬೆಳಗ್ಗೆ ಗೋಪೂಜೆ ಮಾಡಿಯೇ ಕೆಲಸ ಆರಂಭಿಸುತ್ತೇನೆ. ನನ್ನ ಮನೆಯಲ್ಲಿ ಗೋಶಾಲೆ ಇದೆ. 25 ಜಾನುವಾರುಗಳನ್ನು ಸಾಕಿದ್ದೇನೆ. ಹಿಂದುತ್ವದ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಎಷ್ಟು ಮಂದಿ ಮನೆಯಲ್ಲಿ ಗೋವುಗಳನ್ನು ಸಾಕಿದ್ದಾರೆ ಹೇಳಲಿ.

| ಪ್ರಮೋದ್ ಮಧ್ವರಾಜ್, ಜೆಡಿಎಸ್ ಅಭ್ಯರ್ಥಿ