ಯೋಜನೆಗಳು ಎನ್​ಜಿಒ ಪ್ರಾಯೋಜಿತ

ಎನ್.ಆರ್.ಪುರ: ಮಲೆನಾಡಲ್ಲಿ ಹುಲಿ ಸಂರಕ್ಷಣೆೆ, ಕಸ್ತೂರಿ ರಂಗನ್, ಪರಿಸರ ಸೂಕ್ಷ್ಮ, ರಾಷ್ಟ್ರೀಯ ಜೈವಿಕ ಉದ್ಯಾನ ಯೋಜನೆಗಳು ರಾಜ್ಯ ಹಾಗೂ ಕೇಂದ್ರದ ಅರಣ್ಯ ಇಲಾಖೆಗಳಿಗೆ ಸಂಬಂಧಿಸಿಲ್ಲ. ಬದಲಾಗಿ ಅಮೆರಿಕದ ಬೆರಳಣಿಕೆಯಷ್ಟು ಜನರ ಎನ್​ಜಿಒಗಳು ಕಾರ್ಯಕ್ರಮ ಜಾರಿ ಮಾಡುತ್ತಿವೆ ಎಂದು ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗ್ಡೆ ಆರೋಪಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ‘ಮಲೆನಾಡು ಸಮಸ್ಯೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಲೆನಾಡಿನ ಸಮಸ್ಯೆ, ಸವಾಲುಗಳು ಹಾಗೂ ಪರಿಹಾರ ಎಂಬ ವಿಷಯದ ಮಾತನಾಡಿದರು.

ವಿದೇಶಿ ಕಂಪನಿಗಳ ಹಣ ಈ ಯೋಜನೆಗಳಿಗೆ ಹರಿದು ಬರುತ್ತಿದೆ. ಅಲ್ಲಿನ ಎನ್​ಜಿಒಗಳಿಗೆ ಇಲ್ಲಿನ ಸಮಸ್ಯೆಯ ಅರಿವು ಇರುವುದಿಲ್ಲ. ಪ್ರಸ್ತುತ ಜಾಗತಿಕ ತಾಪಮಾನ ಕಡಿಮೆ ಮಾಡಲು ಪಶ್ಚಿಮಘಟ್ಟ ಉಳಿಸಲು ಇಂತಹ ಯೋಜನೆಗಳು ಬರುತ್ತಿವೆ. ಮಲೆನಾಡಿನ ಜನರು ಪರಿಸರ ಹಾಳು ಮಾಡುತ್ತಿಲ್ಲ. ಬದಲಾಗಿ ಪರಿಸರ ಉಳಿಸುತ್ತಿದ್ದಾರೆ. ಆದರೆ ಈ ಯೋಜನೆಗಳು ಮಲೆನಾಡ ರೈತರ ಪಾಲಿಗೆ ಮರಣ ಶಾಸನಗಳಾಗಿವೆ ಎಂದು ಆರೋಪಿಸಿದರು.

ವಾಸ್ತವವಾಗಿ ಜಾಗತಿಕ ತಾಪಮಾನ ಏರಲು ಅತಿಯಾದ ಪೆಟ್ರೋಲ್, ಡೀಸೆಲ್ ಬಳಕೆ, ವಿದ್ಯುತ್ ಯೋಜನೆ, ಕಾಂಕ್ರಿಟೀಕರಣ ಕಾರಣವಾಗುತ್ತಿವೆ. ಒಂದು ಟನ್ ಸಿಮೆಂಟ್ ತಯಾರಿಸಿದರೆ ಲಕ್ಷಾಂತರ ಪಟ್ಟು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗಿ ಗಾಳಿಗೆ ಸೇರುತ್ತದೆ. ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳೇ ಪರಿಸರ ಹಾಳು ಮಾಡುತ್ತಿವೆ ಎಂದು ದೂರಿದರು.

ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ನಾಗೇಶ ಗೌಡ, ಕಾಲೇಜಿನ ಎನ್​ಎಸ್​ಎಸ್ ವಿಭಾಗದ ಮುಖ್ಯಸ್ಥ ಡಾ. ಅಣ್ಣಪ್ಪ ಎನ್. ಮಳೀಮಠ್, ಉಪನ್ಯಾಸಕರಾದ ವಿಶ್ವನಾಥ, ರುಖಯತ್ ಇತರರಿದ್ದರು.