ಮಲ್ಯ ಆಸ್ತಿ ವಶಕ್ಕೆ ಪೂರ್ಣ ಅಧಿಕಾರ

ಮುಂಬೈ: ಭಾರತದ ಬ್ಯಾಂಕ್​ಗಳಿಗೆ ವಂಚಿಸಿ ಲಂಡನ್​ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರನ್ನು ‘ಪರಾರಿಯಾದ ಆರ್ಥಿಕ ವಂಚಕ’ ಎಂದು ವಿಶೇಷ ನ್ಯಾಯಾಲಯ ಘೋಷಿಸಿದೆ. ಆರ್ಥಿಕ ವಂಚನೆ ಅಪರಾಧದ ನೂತನ ಕಾಯ್ದೆಯನ್ವಯ ಇಂಥ ಘೋಷಣೆ ಇದೇ ಮೊದಲು. ಈ ಮಹತ್ವದ ಆದೇಶದಿಂದಾಗಿ, ಜಗತ್ತಿನ ವಿವಿಧೆಡೆ ಮಲ್ಯ ಹೊಂದಿರುವ ಎಲ್ಲ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಳ್ಳುವ ಅಧಿಕಾರ ಜಾರಿ ನಿರ್ದೇ ಶನಾಲಯಕ್ಕೆ (ಇ.ಡಿ) ಸಿಕ್ಕಂತಾಗಿದೆ. ಆರ್ಥಿಕ ವಂಚನೆ ಅಪರಾಧ ಕಾಯ್ದೆ ಜಾರಿಯಾದ ಬಳಿಕ ಇ.ಡಿ. ಮುಂಬೈ ವಿಶೇಷ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ನಡೆ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆಗೆ ಹಾಜರಾಗುವಂತೆ ಇ.ಡಿ., ವಿಶೇಷ ಕೋರ್ಟ್ ಸಮನ್ಸ್ ನೀಡಿದ್ದರೂ ಮಲ್ಯ ಕ್ಯಾರೆ ಎಂದಿರಲಿಲ್ಲ. ಬಳಿಕ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರಂಟ್ ಜಾರಿಗೊಳಿಸಿತ್ತು. ಕೋರ್ಟ್, ಸರ್ಕಾರದ ಯಾವುದೇ ಕಾನೂನು ಪ್ರಕ್ರಿಯೆಗೆ ಮಲ್ಯ ಸ್ಪಂದಿಸದ ಹಿನ್ನೆಲೆಯಲ್ಲಿ ‘ಪರಾರಿ ಯಾದ ಆರ್ಥಿಕ ವಂಚಕ’ ಎಂದು ಘೋಷಿಸಲು ನ್ಯಾಯಾಧೀಶರು ನಿರ್ಧರಿಸಿದರು.

ಹೊಸ ಕಾನೂನಿನ ಅಂಶಗಳೇನು?

 • ಆರ್ಥಿಕ ವಂಚನೆ ಅಪರಾಧ ಕಾಯ್ದೆ ಪ್ರಕಾರ 100 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದರೆ ಜಾರಿ ನಿರ್ದೇಶನಾಲಯ ಅರ್ಜಿ ಸಲ್ಲಿಸಬಹುದು.
 • ನಿರ್ದೇಶನಾಲಯದ ಅರ್ಜಿ ಪರಿಗಣಿಸಿ ಆರೋಪಿಗೆ ಸಮನ್ಸ್ ಹಾಗೂ ವಾರಂಟ್ ಹೊರಡಿಸಲಾಗುತ್ತದೆ.
 • ಕಾನೂನು ಪ್ರಕ್ರಿಯೆಗೆ ಆರೋಪಿ ಸ್ಪಂದಿಸದಿದ್ದರೆ ‘ಪರಾರಿಯಾದ ಆರ್ಥಿಕ ವಂಚಕ’ ಎಂದು ಕೋರ್ಟ್ ಘೋಷಿಸಬಹುದು.
 • ಈ ಹಿಂದಿನ ಕಾಯ್ದೆಯಲ್ಲಿ ಆರೋಪಿಯನ್ನು ಕೋರ್ಟ್ ಅಪರಾಧಿ ಎಂದು ಪರಿಗಣಿಸಿ ಅಂತಿಮ ತೀರ್ಪು ನೀಡಿದ ಬಳಿಕವಷ್ಟೇ ಆಸ್ತಿ ಜಪ್ತಿಗೆ ಅವಕಾಶವಿತ್ತು.
 • ಈ ಕಾಯ್ದೆಯಲ್ಲಿ, ವಿಚಾರಣೆ ಹಂತದಲ್ಲಿಯೇ ಆಸ್ತಿ ಜಪ್ತಿಗೆ ಅವಕಾಶ ನೀಡಲಾಗಿದೆ.

ಮಲ್ಯಗೆ ಸರಣಿ ಸಂಕಷ್ಟ

 • ಭಾರತಕ್ಕೆ ಹಸ್ತಾಂತರ ಮಾಡಲು ಲಂಡನ್ ಕೋರ್ಟ್ ಸಮ್ಮತಿ.
 • ಲಂಡನ್ ಹಾಗೂ ಇತರೆಡೆ ಇರುವ ಆಸ್ತಿಗಳ ಜಪ್ತಿ, ವಿಚಾರಣೆಗೆ ಲಂಡನ್ ಕೋರ್ಟ್ ಅನುಮತಿ.
 • ಭಾರತದಲ್ಲಿ ಆರ್ಥಿಕ ವಂಚಕ ಎಂದು ಘೋಷಣೆ ಹಾಗೂ ಆಸ್ತಿ ಜಪ್ತಿಗೆ ಆದೇಶ.

ಕಿಂಗ್ ಆಫ್ ಬ್ಯಾಡ್ ಟೈಮ್

 • 2016ರ ಮಾ.9: ಭಾರತದಿಂದ ಪರಾರಿಯಾದ ವಿಜಯ ಮಲ್ಯ
 • 2016ರ ಏಪ್ರಿಲ್: ಮಲ್ಯ ವಿರುದ್ಧ ವಾರಂಟ್ ಹೊರಡಿಸಲು ವಿಶೇಷ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ ಇ.ಡಿ.
 • 2017ರ ಏಪ್ರಿಲ್: ಲಂಡನ್​ನಲ್ಲಿ ಮಲ್ಯ ಬಂಧನ ಹಾಗೂ ಜಾಮೀನು
 • 2018ರ ಆಗಸ್ಟ್: ಆರ್ಥಿಕ ವಂಚಕ ಎಂದು ಘೋಷಿಸಲು ಮನವಿ ಸಲ್ಲಿಸಿದ ಜಾರಿ ನಿರ್ದೇಶನಾಲಯ
 • 2018ರ ಜೂನ್: 13,900 ಕೋಟಿ ರೂ. ಆಸ್ತಿ ಮಾರಾಟಕ್ಕೆ ಕರ್ನಾಟಕ ಹೈಕೋರ್ಟ್​ನಲ್ಲಿ ಅರ್ಜಿ
 • 2018ರ ಡಿ.7: ಇ.ಡಿ. ಕಾನೂನು ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸದಿರಲು ಸುಪ್ರೀಂ ಕೋರ್ಟ್ ನಿರ್ಧಾರ
 • ಮಲ್ಯ ಹಸ್ತಾಂತರಕ್ಕೆ ಲಂಡನ್ ಕೋರ್ಟ್ ಆದೇಶ
 • 2019ರ ಜ.5: ಮಲ್ಯ ‘ಪರಾರಿಯಾದ ಆರ್ಥಿಕ ವಂಚಕ’ ಎಂದ ಮುಂಬೈ ಕೋರ್ಟ್

ಜಪ್ತಿ ಪ್ರಕ್ರಿಯೆ ಹೇಗೆ

ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟ್ ಅನುಮತಿ ಪಡೆದು ಮಲ್ಯ ಆಸ್ತಿ ವಿವರ ಸಂಗ್ರಹಿಸಲಿದೆ. ದೇಶದಲ್ಲಿನ ಆಸ್ತಿಗಳನ್ನು ನೇರವಾಗಿ ಇ.ಡಿ. ಅಧಿಕಾರಿಗಳು ಜಪ್ತಿ ಮಾಡುತ್ತಾರೆ. ಭಾರತದ ಹೊರತಾಗಿ ಬೇರೆ ದೇಶಗಳಲ್ಲಿ ಆಸ್ತಿಯಿದ್ದರೆ ಆಯಾ ದೇಶ ಹಾಗೂ ಭಾರತದ ನಡುವಿನ ಒಪ್ಪಂದ ಆಧರಿಸಿ ಕಾನೂನು ಪ್ರಕ್ರಿಯೆ ನಡೆಯಲಿದೆ. ನೂತನ ಕಾಯ್ದೆ ಪ್ರಕಾರ ಈ ಆಸ್ತಿಗಳು ಕೂಡಲೇ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಮಲ್ಯ ಕಳೆದುಕೊಳ್ಳಲಿದ್ದು, ಆಸ್ತಿ ರಕ್ಷಣೆಗಾದರೂ ಭಾರತಕ್ಕೆ ಬರುವುದು ಅನಿವಾರ್ಯವಾಗಲಿದೆ. ನೂತನ ಕಾಯ್ದೆಯಲ್ಲಿನ ಅಂಶಗಳ ಪ್ರಕಾರ ಇಂತಹ ಅಪರಾಧಗಳಲ್ಲಿ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದರೂ ಅದಕ್ಕೆ ಕಾನೂನು ಮನ್ನಣೆ ಸಿಗುವುದು ಕಷ್ಟ.

ಮುಂದಿನ ಪಾಳಿ ಯಾರದ್ದು?

ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಮೋದಿ, ಸಂಡೇಸರ ಕುಟುಂಬ, ಜತಿನ್ ಮೆಹ್ತಾ, ರಾಜೀವ್ ಗೋಯಲ್

One Reply to “ಮಲ್ಯ ಆಸ್ತಿ ವಶಕ್ಕೆ ಪೂರ್ಣ ಅಧಿಕಾರ”

 1. ನಮ್ಮ ದೇಶ ಹಾಳಾಗಲು ಇಂತಹ ಕುತಂತ್ರಿಗಳು, ದೇಶದ್ರೋಹಿಗಳೇ ಕಾರಣ. ಇಂತಹವುಗಳಿಗೆ ಕೊನೆಯೇ ಇಲ್ಲವೆ?

Comments are closed.