ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ, ಜನರಿಗೆ ಇಷ್ಟವಾದರೆ ಮತ ಹಾಕ್ತಾರೆ ಇಲ್ಲ ಅಂದ್ರೆ ಇಲ್ಲ: ಖರ್ಗೆ

ಕಲಬುರಗಿ: ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ. ಜನರಿಗೆ ಇಷ್ಟವಾದರೆ ಮತ ಹಾಕುತ್ತಾರೆ. ಇಲ್ಲವಾದಲ್ಲಿ ನನ್ನನ್ನು ತಿರಸ್ಕರಿಸುತ್ತಾರೆ ಎಂದು ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಮೇಶ್ ಜಾಧವ್ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಒಂದು ಪಕ್ಷದ ಮುಖಂಡನಾಗಿ ಸಿದ್ಧಾಂತದ ಆಧಾರದ ಮೇಲೆ ನಾನು ಹೊರಾಟ ಮಾಡುತ್ತಿದ್ದೇನೆ. ಒಬ್ಬ ಅಭ್ಯರ್ಥಿಯಾಗಿ ನಾನು ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೊಗುತ್ತೇನೆ. ಜನರಿಗೆ ಇಷ್ಟವಾದರೆ ನನಗೆ ಮತ ಹಾಕುತ್ತಾರೆ. ಇಲ್ಲವಾದರೆ ನನ್ನನ್ನು ತಿರಸ್ಕರಿಸುತ್ತಾರೆ ಎಂದರು.

ಹೊಟ್ಟೆಕಿಚ್ಚಿಗೆ ಔಷಧಿ ಇಲ್ಲ
ಒಬ್ಬ ಪ್ರಿಯಾಂಕ್​ ಖರ್ಗೆಯಿಂದ 30 ಜನರಿಗೆ ಅನ್ಯಾಯ ಆಗಿದೆ ಅಂದರೆ ಅವನನ್ನು ಕೆಳಗಿಳಿಸೋಣ. ಆದರೆ, ಯಾರಿಗೇ ಅನ್ಯಾಯ ಆದರೂ ಅದಕ್ಕೆ ನೇರವಾಗಿ ಪ್ರಿಯಾಂಕ್ ಕಾರಣ ಎನ್ನುವುದು ಸರಿಯಲ್ಲ. ಹೈದರಾಬಾದ್​ ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ಅನ್ಯಾಯ ಆದರೂ ಪ್ರಿಯಾಂಕನೇ ಕಾರಣ ಎಂದು ಆರೋಪಿಸುತ್ತಾರೆ. ಪ್ರಿಯಾಂಕ್ ಬಗ್ಗೆ ಬೇರೆಯವರ ಬಳಿ ಇರುವ ಹೊಟ್ಟೆಕಿಚ್ಚಿಗೆ ಔಷಧಿ ಇಲ್ಲ. ಪ್ರಿಯಾಂಕ್​ಗೆ ಬ್ರೇಕ್ ಹಾಕೋಕೆ ಅನೇಕರು ಪ್ರಯತ್ನಿಸಿದಾದರೂ ಮತ್ತೆ ಆರಿಸಿ ಬಂದರು ಎಂದು ತಮ್ಮ ಮಗನ ಬೆನ್ನಿಗೆ ನಿಂತರು.

ಚುನಾವಣೆ ವೇಳೆ ಈ ರೀತಿ ಮಾತನಾಡಬಾರದು
ಸುಮಲತಾ ಬಗ್ಗೆ ರೇವಣ್ಣ ಅವಹೇಳನಾಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು ಸಚಿವ ರೇವಣ್ಣ ಒಬ್ಬ ಹಿರಿಯ ಮುಖಂಡರು. ಏನೇ ಮಾತಾಡುವಾಗ ಅತಿರೇಕದಲ್ಲಿ ಮಾತನಾಡಬಾರದು. ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ಉದ್ವೇಗದ ಮಾತುಗಳಿಗೆ ಅವಕಾಶ ನೀಡಬಾರದು. ಚುನಾವಣೆ ವೇಳೆ ಈ ರೀತಿ ಮಾತನಾಡಬಾರದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)