ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ಕಾಂಗ್ರೆಸ್​ಗೆ ಮತ್ತು ನನಗೆ ಮತ ಹಾಕ್ತಾರೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಈ ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವ ಉಳಿಯಬೇಕೋ ಅಥವಾ ಅಳಿಯಬೇಕೋ ಎಂದು ನಿರ್ಧರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ಕಾಂಗ್ರೆಸ್​ಗೆ ಮತ್ತು ನನಗೆ ಮತ ಹಾಕುತ್ತಾರೆ ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಖರ್ಗೆ, ಚಿತ್ರದುರ್ಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೈನಿಕರ ಹೆಸರಿನಲ್ಲಿ ಮತ ಕೇಳಿದ್ದಾರೆ. ಸೈನಿಕರು ಗಡಿಯಲ್ಲಿ ನಿಂತು ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಇದೀಗ ಸೇನೆಯನ್ನು ಮೋದಿ ಸೇನೆ ಎನ್ನಲಾಗುತ್ತಿದೆ. ಅವರೇನು ಗಡಿಯಲ್ಲಿ ನಿಂತುಕೊಂಡಿದ್ದರಾ ಎಂದು ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

ನಾವು ಸ್ವಾತಂತ್ರಯ ತರುವಲ್ಲಿ ಮತ್ತು ಸಂವಿಧಾನ ರಕ್ಷಣೆಗಾಗಿ ಪ್ರಾಣ ಅರ್ಪಿಸಿದ್ದೇವೆ. ಆದರೆ ಬಿಜೆಪಿಯವರು ಒಬ್ಬರೇ ಒಬ್ಬರು ಪ್ರಾಣ ತೆತ್ತಿದ್ದಾರಾ ಹೇಳಿ. ನಾವು ಕಟ್ಟಿರುವ ಮನೆಗೆ ಬಂದು ಮೋದಿ ಅಧಿಕಾರ ನಡೆಸುತ್ತಿದ್ದಾರೆ. ಮೋದಿಗೆ ಪುಕ್ಸಟ್ಟೆಯಾಗಿ ಪ್ರಧಾನಿ ಪಟ್ಟ ಸಿಕ್ಕಿದೆ ಎಂದು ಮೋದಿ ವಿರುದ್ಧ ಖರ್ಗೆ ಕಿಡಿ ಕಾರಿದರು.

ಈ ಬಾರಿ ಏನಾದ್ರು ಮಾಡಿ‌ ಖರ್ಗೆಯನ್ನು ಸೋಲಿಸಬೇಕು ಎಂದು ಬಿಜೆಪಿಯವರು ಮುಂದಾಗಿದ್ದಾರೆ. ಇದರಿಂದಲೇ ತಿಳಿಯುತ್ತದೆ ಸಂಸತ್ತಿನಲ್ಲಿ ಖರ್ಗೆ ಎಷ್ಟು ಪ್ರಭಾವ ಹೊಂದಿದ್ದಾರೆ ಎಂಬುದು. ಸಂಸತ್ತಿನಲ್ಲಿ ನಿದ್ರಿಸುವ ಸಂಸದರನ್ನು ಯಾರೂ ಸೋಲಿಸೋಕೆ ಮುಂದಾಗುವುದಿಲ್ಲ. ನಾನು ವಿಧಾನಸಭೆಯಿಂದ ಲೋಕಸಭೆಗೆ ಹೋಗುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ನನ್ನ ಜಾಗಕ್ಕೆ ಕಾಂಗ್ರೆಸ್​ನಿಂದ ಯಾರು ಅಭ್ಯರ್ಥಿ ಸಿಗದೆ ಇದ್ದಾಗ ಪ್ರಿಯಾಂಕ್​ ಖರ್ಗೆಯನ್ನು ನಿಲ್ಲಿಸಲು ಹೇಳಿದ್ದರು. ಪ್ರಿಯಾಂಕ್ ಖರ್ಗೆ ಕೂಡ 15 ವರ್ಷ ಪಕ್ಷದ ಸದಸ್ಯನಾಗಿ ಕೆಲಸ ಮಾಡಿ ಟಿಕೆಟ್ ಪಡೆದು ಗೆದ್ದು ಬಂದಿದ್ದಾನೆ. ಆತನನ್ನು ಸೋಲಿಸಬೇಕು ಎಂದು ಬಂದವನು ಸೋತು ಮನೆ ಸೇರಿದ್ದಾನೆ ಎಂದು ಪರೋಕ್ಷವಾಗಿ ಮಾಲೀಕಯ್ಯ ಗುತ್ತೆದಾರ್​ಗೆ ತಿರುಗೇಟು ನೀಡಿದರು.

ಹೊರಗಿನವರ ಸಲಹೆ ಬೇಕಾಗಿಲ್ಲ

ನಮ್ಮ ದೇಶದ ಸಮಸ್ಯೆಯನ್ನು ಬಗೆಹರಿಸಲು ಮತ್ತು ನಮ್ಮ ದೇಶದ ರಕ್ಷಣೆ ಮಾಡಲು ನಾವು ಸಮರ್ಥರಿದ್ದೇವೆ. ಇದರಲ್ಲಿ ಯಾವುದೇ ಪಕ್ಷ ಬರುವುದಿಲ್ಲ. ದೇಶಕ್ಕಾಗಿ ನಾವೆಲ್ಲರೂ ಒಂದೇ. ದೇಶದ ವಿಚಾರದಲ್ಲಿ ಹೊರಗಿನವರ ಸಲಹೆ ನಮಗೆ ಬೇಕಾಗಿಲ್ಲ. ಹಾಗೆ ಈ ವಿಷಯವನ್ನು ಯಾರೂ ಬಳಸಿಕೊಳ್ಳಬೇಕಿಲ್ಲ ಎಂದು ಖರ್ಗೆ ತಿಳಿಸಿದರು.

Leave a Reply

Your email address will not be published. Required fields are marked *