ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಗದ್ದುಗೆ?

| ವಾದಿರಾಜ ವ್ಯಾಸಮುದ್ರ, 

ಕಲಬುರಗಿ: ಶತಮಾನದ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಕೇಂದ್ರದ ಮಾಜಿ ಸಚಿವ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಲಂಕರಿಸುವರೆ? ಇಂಥದ್ದೊಂದು ಪ್ರಶ್ನೆ ಈಗ ಕಾಂಗ್ರೆಸ್ ಪಾಳಯದಲ್ಲಿ ಬಲವಾಗಿ ಹರಿದಾಡುತ್ತಿದೆ. ಒಂದು ವೇಳೆ ಖರ್ಗೆ ಅಧ್ಯಕ್ಷಗಿರಿ ಒಪ್ಪಿಕೊಂಡರೆ ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷರಾದ ಮೊದಲಿಗರೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಆದರೆ ಈ ಸುದ್ದಿಯನ್ನು ಅಲ್ಲಗಳೆದಿರುವ ಖರ್ಗೆ, ರಾಹುಲ್ ಅವರೇ ಅಧ್ಯಕ್ಷ ಎಂಬ ಮಾತನ್ನು ಹೇಳಿದ್ದಾರೆ. ಆದರೂ ಪಕ್ಷದಲ್ಲಿ ಕುತೂಹಲ ಮನೆ ಮಾಡಿದೆ.

ಮಣಿಯದ ರಾಹುಲ್: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದ್ದು, ಸ್ವತಃ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯಲ್ಲಿ ಸೋಲು ಅನುಭವಿಸಿದ್ದಾರೆ. ಇದು ಅವರ ಬಲವಾದ ನೋವಿಗೆ ಕಾರಣವಾಗಿದ್ದು, ನೈತಿಕ ಹೊಣೆ ಹೊತ್ತು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ರಾಹುಲ್ ಪದತ್ಯಾಗಕ್ಕೆ ಕಾಂಗ್ರೆಸ್ಸಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಅವರೇ ಮುಂದುವರಿಯಬೇಕೆಂದು ಒತ್ತಾಯಿಸುತ್ತಿದ್ದಾರಾದರೂ, ರಾಹುಲ್ ಯಾರ ಒತ್ತಡಕ್ಕೂ ಮಣಿಯುತ್ತಿಲ್ಲ. ಎಐಸಿಸಿಗೆ ಯಾರೇ ಅಧ್ಯಕ್ಷರಾದರೂ ಕಾಂಗ್ರೆಸ್ ನೆಹರು ಮನೆತನದ ಹಿಡಿತದಲ್ಲೇ ಇತ್ತು. ಆದರೆ ಈ ಸಲ ಈ ಮನೆತನ ಬಿಟ್ಟು ಬೇರೆಯವರಿಗೆ ಕೊಡುವ ಆಲೋಚನೆ ನಡೆದಿದೆ. ಒಂದು ವೇಳೆ ಎಐಸಿಸಿಯೇ ಖರ್ಗೆ ಅಧ್ಯಕ್ಷರಾಗಬೇಕೆಂದು ನಿರ್ಧರಿಸಿದರೆ ಖರ್ಗೆ ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಾರೆಂಬುದು ಪಕ್ಷದೊಳಗಿನ ಅಭಿಪ್ರಾಯ. ಹೈಕಮಾಂಡ್ ತೀರ್ವನವನ್ನು ಅವರು ಎಂದೂ ತಿರಸ್ಕರಿಸಿಲ್ಲ. ಆದರೆ, ಈವರೆಗೆ ಪಕ್ಷದ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ರಾಹುಲ್ ಹೊರತಾಗಿ ಬೇರೆ ಹೆಸರು ಚರ್ಚೆಗೆ ಬಂದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಮರ್ಥ ನಾಯಕ

ಕಲಬುರಗಿ ರಾಜಕೀಯವಾಗಿ ಸಾಕಷ್ಟು ಜಾಗೃತಿ ಹೊಂದಿದೆ. ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ದಿ.ವೀರೇಂದ್ರ ಪಾಟೀಲ್ ಮತ್ತು ದಿ. ಎನ್. ಧರ್ಮಸಿಂಗ್ ಕಲಬುರಗಿ ಜಿಲ್ಲೆಯವರೇ. ಖರ್ಗೆ ಸೇರಿ ಇದೇ ಜಿಲ್ಲೆಯ ಮೂವರು ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಾಗಿಯೂ ಸೇವೆ ಸಲ್ಲಿಸಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಲೋಕಸಭೆಯಲ್ಲಿ ಸರಿಯಾದ ಪ್ರತಿಸ್ಪರ್ಧೆ ಒಡ್ಡಿದ್ದೂ ಉಂಟು.

ಕಾಂಗ್ರೆಸ್​ಗೆ ಲಾಭವಿದೆ

ಸದ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ಖರ್ಗೆ ಇಡೀ ದೇಶದಲ್ಲಿ ಪಕ್ಷವನ್ನು ಮತ್ತೊಮ್ಮೆ ಸಂಘಟಿಸಬಲ್ಲರು. ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಒಗ್ಗೂಡಿಸಿ ಕಾಂಗ್ರೆಸ್​ಗೆ ಲಾಭ ತಂದುಕೊಡಬಲ್ಲ ಶಕ್ತಿ ಹೊಂದಿದ್ದಾರೆ. ಹಿಂದಿ, ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯವೂ ಇದೆ. ಜತೆಗೆ ಜಮ್ಮು-ಕಾಶ್ಮೀರ ದಿಂದ ಹಿಡಿದು ಕೇರಳವರೆಗೆ ಸಂಪರ್ಕ ಹೊಂದಿದ್ದು, ಬಿಜೆಪಿಗೆ ಬಲವಾದ ಸವಾಲು ಒಡ್ಡಬಲ್ಲವರಾಗಿದ್ದಾರೆ. ಅಂತೆಯೇ ಇವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂಬ ಕೂಗು ಬಲವಾಗುತ್ತಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಬಹುತೇಕ ಸಂಪುಟಗಳಲ್ಲಿ ಸಚಿವರಾಗಿ ಪ್ರಮುಖ ಖಾತೆಗಳನ್ನು ಖರ್ಗೆ ನಿಭಾಯಿಸಿದ್ದ ಖರ್ಗೆ, ಕೇಂದ್ರದಲ್ಲಿ ಕಾರ್ವಿುಕ ಮತ್ತು ರೈಲ್ವೆ ಸಚಿವರಾಗಿದ್ದರು. ಕಾಂಗ್ರೆಸ್​ನ ಬಹುತೇಕ ಘಟಾನುಘಟಿ ನಾಯಕರು ಖರ್ಗೆಯವರನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದ್ದು, ‘ಕೈ’ ಕೋಟೆಯನ್ನು ಭದ್ರಪಡಿಸಬಲ್ಲರು ಎಂದು ಹೇಳಲಾಗುತ್ತಿದೆ.

ನನಗೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರೆಯಲಿದೆ ಎಂಬುದು ಕೇವಲ ಊಹಾಪೋಹ. ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿಯಬೇಕು. ಚುನಾವಣೆಯಲ್ಲಿ ಸೋಲು-ಗೆಲುವು ಇದ್ದದ್ದೆ. ಹಾಗಂತ ರಾಹುಲ್ ಚಿಂತಿತರಾಗಬಾರದು. ಅದರ ಬದಲು ಪಕ್ಷ ಸಂಘಟನೆಗೆ ಅಧ್ಯಕ್ಷರಾಗಿ ಮುಂದುವರಿಯಬೇಕು.

| ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ

ಕಾಂಗ್ರೆಸ್ ಸೋಲಿನ ಸತ್ಯಶೋಧನೆ ಪ್ರವಾಸ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಉಂಟಾದ ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಮುಂದಾಗಿದ್ದು, ರಾಜ್ಯಾದ್ಯಂತ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪ್ರಮುಖರು ಸೋಲಿನ ಕಾರಣಗಳ ಬಗ್ಗೆ ರ್ಚಚಿಸಿದರು. ಈವರೆಗೆ ಗೆಲುವಿನ ಪರಾಮರ್ಶೆ ನಾಯಕರ ಹಂತದಲ್ಲೇ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ತಳಮಟ್ಟದ ಕಾರ್ಯಕರ್ತರ ಅನಿಸಿಕೆ ಪಡೆಯಲು ಪಕ್ಷ ಮುಂದಾಗಿದೆ. ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, 28 ಲೋಕಸಭಾ ಕ್ಷೇತ್ರಗಳಲ್ಲೂ ಪ್ರವಾಸ ನಡೆಸಿ ಮುಖಂಡರು, ಕಾರ್ಯಕರ್ತರ ಸಲಹೆ ಪಡೆಯುತ್ತೇವೆ. ಬಳಿಕ ವರದಿಯನ್ನು ಕೆಪಿಸಿಸಿಗೆ ಸಲ್ಲಿಸುತ್ತೇವೆ ಎಂದರು.

One Reply to “ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಗದ್ದುಗೆ?”

  1. Whoever be the president of aicc the Congress will not come back to power because their perspective concept and priority is not changed. Modi is the fittest and continue in power for another 15 yeRs
    9pm

Leave a Reply

Your email address will not be published. Required fields are marked *