ಸಿಬಿಐ ಮುಖ್ಯಸ್ಥರ ನೇಮಕಕ್ಕೆ ಮಲ್ಲಿಕಾರ್ಜುನ್​ ಖರ್ಗೆ ರಾಜಕೀಯ ಬಣ್ಣ ಬಳಿದಿದ್ದಾರೆ: ಅರುಣ್​ ಜೇಟ್ಲಿ ಅಸಮಾಧಾನ

ನವದೆಹಲಿ: ರಿಶಿ ಕುಮಾರ್​ ಶುಕ್ಲಾ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಅಸಮ್ಮತಿ ಸೂಚಿಸಿದ್ದ ಮಲ್ಲಿಕಾರ್ಜುನ್​ ಖರ್ಗೆಗೆ ಕೇಂದ್ರ ಸಚಿವ ಅರುಣ್​ ಜೇಟ್ಲಿ ತಿರುಗೇಟು ನೀಡಿದ್ದು, ಕಾಂಗ್ರೆಸ್​ ಮುಖಂಡರು ಪ್ರತಿ ವಿಚಾರದಲ್ಲೂ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಬ್ಲಾಗ್​ ಪೋಸ್ಟ್​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅರುಣ್​ ಜೇಟ್ಲಿ, ಮಲ್ಲಿಕಾರ್ಜುನ್​ ಖರ್ಗೆ ಅವರು ಅಸಮ್ಮತಿ ಎಂಬ ಶಬ್ದದ ಮೌಲ್ಯವನ್ನೇ ಹಾಳುಗೆಡುವುತ್ತಿದ್ದಾರೆ. ಪ್ರತಿಯೊಂದಕ್ಕೂ ಅಸಮ್ಮತಿ ಸೂಚಿಸುತ್ತಿದ್ದಾರೆ. ರಾಜಕೀಯ ಕಾರಣ ಮುಂದಿಟ್ಟುಕೊಂಡು ಸಿಬಿಐ ಮುಖ್ಯಸ್ಥರ ನೇಮಕವನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿಬಿಐ ಮುಖ್ಯಸ್ಥರ ನೇಮಕ, ವರ್ಗಾವಣೆಗೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳುವ ಪ್ರಧಾನ ಮಂತ್ರಿ, ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರತಿಪಕ್ಷ ಮುಖಂಡರನ್ನೊಳಗೊಂಡ ಉನ್ನತ ಸಮಿತಿಯಲ್ಲಿ ಮಲ್ಲಿಕಾರ್ಜುನ್​ ಖರ್ಗೆಯವರ ಅಸಮ್ಮತಿ, ವಿರೋಧವೆಂಬುದು ನಿಶ್ಚಿತವಾಗಿಬಿಟ್ಟಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಸಿಬಿಐ ಮುಖ್ಯಸ್ಥರ ನೇಮಕವನ್ನು ಮಲ್ಲಿಕಾರ್ಜುನ್​ ಖರ್ಗೆಯವರು ರಾಜಕೀಯ ಹೋರಾಟವನ್ನಾಗಿದ್ದಾರೆ.

ಅಲೋಕ್​ ವರ್ಮಾ ವರ್ಗಾವಣೆಗೂ ಅಸಮ್ಮತಿ ಎಂದಿದ್ದರು. ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದರು. ಅವರ ನಿಲುವು ಪ್ರಧಾನಿ ನೇತೃತ್ವದ ಸಮಿತಿಯ ಅರಿವಿಗೆ ಬಂದಿದ್ದರಿಂದ ಅದರಿಂದ ಪಾರಾಗಬೇಕಿತ್ತು. ಮಲ್ಲಿಕಾರ್ಜುನ್​ ಖರ್ಗೆಯವರದ್ದು ಪಕ್ಷಪಾತ ನಿಲುವು ಎಂದು ಹೇಳಿದ್ದಾರೆ.