ವಿಷ ಸೇವಿಸಿ ಡಿಸಿ ಕಚೇರಿಯಲ್ಲಿ ಹೈ ಡ್ರಾಮಾ

ಚಿಕ್ಕಮಗಳೂರು: ವಿಷ ಕುಡಿದ ವ್ಯಕ್ತಿಯೋರ್ವ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಪ್ರವೇಶ ದ್ವಾರದ ಬಳಿ ಅಸ್ವಸ್ಥನಾಗಿ ಬಿದ್ದು ಸೋಮವಾರ ಹೈ ಡ್ರಾಮಾ ಸೃಷ್ಟಿಸಿದ್ದಾನೆ.

ಮಲ್ಲೇನಹಳ್ಳಿಯ ಶಿವರಾಜ್ ಇಂತಹ ಅವಾಂತರಕ್ಕೆ ಕಾರಣನಾದ ವ್ಯಕ್ತಿ. ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಆತ, ದೂರು ನೀಡಲಿದ್ದ. ಅದಾಗಲೇ ಶಿವರಾಜ್ ಮದ್ಯದ ಜತೆ ಕೀಟನಾಶಕ ಬೆರೆಸಿ ಸೇವಿಸಿದ್ದ. ಜಿಲ್ಲಾಧಿಕಾರಿ ಕಚೇರಿ ದ್ವಾರದ ಬಳಿ ಬಂದ ಆತ ಅಲ್ಲೇ ಅಸ್ವಸ್ಥಗೊಂಡು ವಾಂತಿ ಮಾಡಿ ಮಲಗಿದ. ಇದರಿಂದ ವಿಚಲಿತರಾದ ಕಚೇರಿ ಸಿಬ್ಬಂದಿ ಆಂಬುಲೆನ್ಸ್​ಗೆ ಕರೆ ಮಾಡಿದರು. ಅದು ಬರುವುದು ತಡವಾಗುವುದೆಂದು ಗೊತ್ತಾದಾಕ್ಷಣ ನಗರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.

ಕಚೇರಿ ಎದುರು ಮಲಗಿದ್ದ ಸಂದರ್ಭ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಆಗಮಿಸಿದರೂ ಶಿವರಾಜ್ ಮಾತನಾಡದ ಪರಿಸ್ಥಿತಿಯಲ್ಲಿದ್ದುದರಿಂದ ಕಚೇರಿಯೊಳಕ್ಕೆ ತೆರಳಿದರು. ಪೊಲೀಸರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಾನಸಿಕ ಅಸ್ವಸ್ಥನಂತೆ ಇರುವ ಶಿವರಾಜ್ ಈ ನಡುವೆ ಪ್ರಶ್ನೆ ಕೇಳಿದವರಿಗೆ ನೀಡಿದ ಉತ್ತರ ವಿಚಿತ್ರವಾಗಿತ್ತು. ಗ್ರಾಮದಲ್ಲಿ ಸಾಲ ಪಡೆದಿದ್ದೆ. ಸಾಲಗಾರರು ಬಹಳ ಹಿಂಸೆ ಕೊಡುತ್ತಿದ್ದಾರೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ನಮಗೆ ಮಾರಣಾಂತಿಕ ಕಾಯಿಲೆ ಇದೆ ಸುದ್ದಿ ಹರಡಲಾಗುತ್ತಿದೆ ಎಂದು ಹೇಳಿಕೆ ನೀಡಿದ. ಇದರಿಂದ ನಾವು ನೊಂದಿರುವುದಾಗಿ ಹೇಳಿಕೊಂಡ. ಮಾಧ್ಯಮದವರ ಜತೆ ಮಾತನಾಡುವ ಕಾಲಕ್ಕೆ ನನಗೆ ಹಾಗೂ ನನ್ನ ಪತ್ನಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದು, ನಮ್ಮ ಮಾತುಗಳನ್ನು ಕದ್ದಾಲಿಸುತ್ತಿದ್ದಾರೆ ಎಂಬ ವಿಚಿತ್ರ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.