ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೆ.23ರಂದು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಬೆಳ್ಳಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಮಲ್ಲಮ್ಮ ಯಾಳವಾರ ಹೇಳಿದರು.
ಮಹಿಳೆಯರಿಗೆ ಸುಲಭ ಸುಲಭವಾಗಿ ಸಾಲ ಸೌಲಭ್ಯ ದೊರಕಿಸುವುದರ ಮೂಲಕ ಅವರ ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ ಪ್ರಾರಂಭಿಸಲಾಗಿದೆ. ಪ್ರಾರಂಭದಲ್ಲಿ 2515 ಸದಸ್ಯೆಯರನ್ನು ಒಳಗೊಂಡಿದ್ದ ಬ್ಯಾಂಕ್ ಇಂದು 11 ಸಾವಿರ ಸದಸ್ಯರನ್ನು ಹೊಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸ್ವಂತ ಉದ್ಯೋಗ, ಹೈನುಗಾರಿಕೆ, ವಾಹನ, ಯಂತ್ರೋಪಕರಣ ಖರೀದಿ, ನಿವೇಶನ,ಮನೆ ಖರೀದಿ, ವ್ಯಾಪಾರ, ಗುಡಿ ಕೈಗಾರಿಕೆ ಇನ್ನಿತರ ಉದ್ದೇಶಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಅಲ್ಲದೆ ಚಿನ್ನಾಭರಣ ಖರೀದಿಗೆ, ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಲುವಾಗಿ, ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತದೆ. ಪ್ರಾರಂಭದಿಂದಲೂ ಬ್ಯಾಂಕು ಉನ್ನತ ಶ್ರೇಣಿಯಲ್ಲಿ ಮುಂದುವರೆದಿದ್ದು, ಲಾಭ ಗಳಿಸುತ್ತ ಬಂದಿದೆ. 2013 ರಿಂದ ಈವರೆಗೆ ಜಮಖಂಡಿ, ಜಲನಗರ, ದೇವರ ಹಿಪ್ಪರಗಿ ಮತ್ತು ವಿಜಯಪುರದ ನಗರ ಸೇರಿಂದತೆ ಒಟ್ಟು 5 ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇನ್ನು ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲೂಕಿನಲ್ಲಿಯೂ ನೂತನ ಶಾಖೆಗಳ ಪ್ರಾರಂಭಕ್ಕೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಪ್ರಸ್ತುತ ಬ್ಯಾಂಕು 25 ಸಾವಿರ ಗ್ರಾಹಕರನ್ನು ಹೊಂದಿದ್ದು, 120 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ ವ್ಯಾಪಾರ ವಹಿವಾಟು ಕೈಕೊಳ್ಳುತ್ತಿದೆ. 2018-19 ರಲ್ಲಿ ಒಟ್ಟು 650 ಕೋಟಿ ರೂ. ವಾರ್ಷಿಕ ವಹಿವಾಟು ಮಾಡಿದ್ದು, 58.98 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಆ ಮೂಲಕ ತನ್ನ ಷೇರುದಾರರಿಗೆ ಶೇ.9 ರಷ್ಟು ಲಾಭಾಂಶ ಹಂಚಲು ನಿರ್ಧರಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಮಹಿಳಾ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
ಮೊಬೈಲ್ ಬ್ಯಾಂಕಿಂಗ್, ಎಟಿಎಂ ಸೇವೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಆ ಮೂಲಕ ವಾಣಿಜ್ಯ ಬ್ಯಾಂಕುಗಳೊಂದಿಗೆ ಸವಾಲೊಡ್ಡುವ ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ರಾಜ್ಯ ಸರ್ಕಾರ ಕಾಯಕಯೋಗಿ ಯೋಜನೆಯಡಿಯಲ್ಲಿ ಸುಮಾರು 75 ಮಹಿಳಾ ಸ್ವ-ಸಹಾಯ ಸಂಘಗಳಿಗೆ 414.21 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಅಂದು ನಡೆಯುವ ಬೆಳ್ಳಿ ಸಂಭ್ರಮವನ್ನು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ ಉದ್ಘಾಟಿಸಲಿದ್ದಾರೆ. ಶಾರದಾಶ್ರಮದ ಕೈವಲ್ಯಮಯಿ ಕೃಪಾಮಯಿ ಮಾತೋಶ್ರೀ ಅವರು ಸಾನ್ನಿಧ್ಯವಹಿಸಲಿದ್ದಾರೆ. ಮಹಿಳಾ ವಿವಿ ಉಪ ಕುಲಪತಿ ಪ್ರೊ.ಸಬಿಹಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಂಸದ ರಮೇಶ ಜಿಗಜಿಣಗಿ ರುಪೇ ಕಾರ್ಡ್ ಬಿಡುಗಡೆ ಮಾಡುವರು. ಶಾಸಕ ಎಂ.ಬಿ.ಪಾಟೀಲ ಡಿಜಿಟಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಶಿವಾನಂದ ಪಾಟೀಲ ಬ್ಯಾಂಕ್ನ ವೆಬ್ಸೈಟ್ ಅನಾವರಣಗೊಳಿಸಲಿದ್ದಾರೆ. ಎಂಎಲ್ಸಿ ಅರುಣ ಶಹಾಪುರ, ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ್, ಸಿ.ಬಿ.ಚಿಕ್ಕಾಡಿ, ಜಿ.ಟಿ.ಗಚ್ಚಿ, ಡಾ.ಅಶೋಕ ಪಾಟೀಲ, ಆಂಜನೇಯ ರೆಡ್ಡಿ, ವಿಶ್ವನಾಥ ಹಿರೇಮಠ ಹಾಗೂ ಡಾ.ಎಚ್.ವಿ.ಕರಿಗೌಡರ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕಿ ಲಕ್ಷ್ಮಿ ಬಳಗೊಂಡ, ರಮಬಾಯಿ ದರಬಾರ, ಮೈತ್ರಾ ಬಾಗೇವಾಡಿ ಸುದ್ದಿಗೋಷ್ಠಿಯಲ್ಲಿದ್ದರು.
