ನಾಗ್ಪುರ: ಬ್ಯಾಟರ್ ಡ್ಯಾನಿಶ್ ಮಾಲೆವಾರ್ (79 ರನ್, 157 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಆರಂಭಿಕ ಧ್ರುವ ಶೋರೆ (74 ರನ್, 109 ಎಸೆತ, 9 ಬೌಂಡರಿ) ಆಕರ್ಷಕ ಬ್ಯಾಟಿಂಗ್ ನೆರವನಿಂದ ಹಾಲಿ ರನ್ನರ್ ಅಪ್ ವಿದರ್ಭ ತಂಡ ಪ್ರತಿಷ್ಠಿತ ದೇಶೀಯ ರಣಜಿ ಟ್ರೋಫಿ ಟೂರ್ನಿಯ ಸೆಮಿೈನಲ್‌ನಲ್ಲಿ ಚಾಂಪಿಯನ್ ಮುಂಬೈ ಎದುರು ಮೊದಲ ದಿನ ಮೇಲುಗೈ ಸಾಧಿಸಿದ್ದು, ಬೃಹತ್ ಮೊತ್ತ ಕಲೆಹಾಕುವತ್ತ ಸಾಗಿದೆ.
ವಿಸಿಎ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಕಳೆದ ಬಾರಿ ಫೈನಲ್‌ಲಿಸ್ಟ್‌ಗಳ ಮುಖಾಮುಖಿಯಲ್ಲಿ ಟಾಸ್ ಗೆದ್ದ ವಿದರ್ಭ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಅರ್ಥವ ತೈಡೆ (4) ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ನಂತರ ದೊಡ್ಡ ಜತೆಯಾಟದ ಕೊರತೆಯ ನಡುವೆಯೂ ಧ್ರುವ ಶೋರೆ ಹಾಗೂ ಡ್ಯಾನಿಶ್ ನಡೆಸಿದ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ವಿದರ್ಭ ದಿನದಂತ್ಯಕ್ಕೆ 88 ಓವರ್‌ಗಳಲ್ಲಿ 5 ವಿಕೆಟ್‌ಗೆ 308 ರನ್ ಕಲೆಹಾಕಿದೆ.
ನಾಯಕ ಅಕ್ಷಯ್ ವಾಡ್ಕರ್ (13*) ಜತೆಯಾಗಿ ಯಶ್ ರಾಥೋಡ್ (47*) ಮುರಿಯದ 6ನೇ ವಿಕೆಟ್‌ಗೆ 47 ರನ್‌ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಹಾಲಿ ದೇಶೀಯ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕನ್ನಡಿಗ ಕರುಣ್ ನಾಯರ್ (45) ಉಪಯುಕ್ತ ರನ್ ಕಲೆಹಾಕಿದರೂ, ಶಿವಂ ದುಬೆ ಎಸೆತದಲ್ಲಿ ಕೀಪರ್‌ಗೆ ಕ್ಯಾಚಿತ್ತರು.
ವಿದರ್ಭ: 88 ಓವರ್‌ಗಳಲ್ಲಿ 5 ವಿಕೆಟ್‌ಗೆ 308 (ಅರ್ಥವ 4, ಧ್ರುವ 74, ಪಾರ್ಥ್ 23, ಡ್ಯಾನಿಶ್ 79, ಕುರಣ್ ನಾಯರ್ 45, ಯಶ್ 47*, ಅಕ್ಷಯ್ 13*, ಶಿವಂ ದುಬೆ 35ಕ್ಕೆ 2, ಶಮ್ಸ್ 44ಕ್ಕೆ 2)
ಕೇರಳಕ್ಕೆ ಸಚಿನ್ ಬೇಬಿ ಆಸರೆ
ಅಹಮದಾಬಾದ್: ನಾಯಕ ಸಚಿನ್ ಬೇಬಿ (69* ರನ್, 193 ಎಸೆತ, 8 ಬೌಂಡರಿ) ತಾಳ್ಮೆಯುತ ಬ್ಯಾಟಿಂಗ್ ನೆರವಿನಿಂದ ಕೇರಳ ತಂಡ ಇನ್ನೊಂದು ಸೆಮಿೈನಲ್‌ನಲ್ಲಿ ಆತಿಥೇಯ ಗುಜರಾತ್ ಎದುರು ದಿಟ್ಟ ಹೋರಾಟ ತೋರಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ಬ್ಯಾಟಿಂಗ್‌ಗೆ ಇಳಿಯಿತು. ಉತ್ತಮ ಆರಂಭದ ಬಳಿಕ ಪರದಾಡಿದ ಕೇರಳ ಮೊದಲ ದಿನದಂತ್ಯಕ್ಕೆ 89 ಓವರ್‌ಗಳಲ್ಲಿ 4 ವಿಕೆಟ್‌ಗೆ 206 ರನ್‌ಗಳಿಸಿದೆ. ಸಚಿನ್ ಜತೆಯಾಗಿ ಮೊಹಮದ್ ಅಜರುದ್ದೀನ್ (30*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕೇರಳ: 89 ಓವರ್‌ಗಳಲ್ಲಿ 206 (ಅಕ್ಷಯ್ 30, ರೋಹನ್ 30, ವರುಣ್ 10, ಸಚಿನ್ 69*, ಜಲಜ್ 30, ಅಜರುದ್ದೀನ್ 30*, ರವಿ ಬಿಷ್ಣೋಯಿ 33ಕ್ಕೆ 1).