ಕೌಲಾಲಂಪುರ: ಭಾರತದ ಸ್ಟಾರ್ ಷಟ್ಲರ್ಗಳಾದ ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೇರಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್ಎಸ್ ಪ್ರಣಯ್ ಹಾಗೂ ಸಮೀರ್ ವರ್ಮ ನಿರಾಸೆ ಅನುಭವಿಸಿದರು. ಈ ಮೂಲಕ ಟೂರ್ನಿಯಲ್ಲಿ ಸೈನಾ ಹಾಗೂ ಸಿಂಧು ಭಾರತದ ಆಶಾಕಿರಣವಾಗಿ ಉಳಿದಿದ್ದಾರೆ.
ಗುರುವಾರ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್, 6ನೇ ಶ್ರೇಯಾಂಕಿತ ಆಟಗಾರ್ತಿ ಪಿವಿ ಸಿಂಧು 21-10, 21-15 ನೇರ ಗೇಮ್ಳಿಂದ ಜಪಾನ್ನ ಅಯಾ ಓಹೊರಿ ಎದುರು ಕೇವಲ 34 ನಿಮಿಷಗಳಲ್ಲಿ ಜಯ ದಾಖಲಿಸಿದರು. ಜಪಾನ್ ಆಟಗಾರ್ತಿ ವಿರುದ್ಧ ಸಿಂಧುಗೆ ಸತತ 9ನೇ ಗೆಲುವು ಇದಾಗಿದೆ. ಮುಂದಿನ ಸುತ್ತಿನಲ್ಲಿ ಚೀನಾ ತೈಪೆಯ ವಿಶ್ವ ನಂ.1 ಆಟಗಾರ್ತಿ ತೈ ಜು ಯಿಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಇಂಡೋನೇಷ್ಯಾ ಮಾಸ್ಟರ್ಸ್ ಜಯಿಸಿದ್ದ ಸೈನಾ ನೆಹ್ವಾಲ್ 25-23, 21-12 ರಿಂದ ದಕ್ಷಿಣ ಕೊರಿಯಾದ ಅನ್ ಸೆ ಯಂಗ್ ಅವರನ್ನು 39 ನಿಮಿಷಗಳ ಹೋರಾಟದಲ್ಲಿ ಸೋಲಿಸಿದರು.
ಕೊರಿಯಾ ಆಟಗಾರ್ತಿ ಎದುರು ಸೈನಾಗೆ ಇದು ಮೊದಲ ಗೆಲುವು. ಸೈನಾ ನೆಹ್ವಾಲ್ ಮುಂದಿನ ಸುತ್ತಿನಲ್ಲಿ ಒಲಿಂಪಿಕ್ ಚಾಂಪಿಯನ್ ಕ್ಯಾರೊಲಿನಾ ಮರಿನ್ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮ 19-21, 20-22ರಿಂದ ಮಲೇಷ್ಯಾದ ಲೀ ಜೀ ಜಿಯಾ ಎದುರು ಶರಣಾದರೆ, ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಎಚ್ಎಸ್ ಪ್ರಣಯ್ 14-21, 16-21 ರಿಂದ ವಿಶ್ವ ನಂ.1 ಆಟಗಾರ ಜಪಾನ್ನ ಕೆಂಟೊ ಮೊಮೊಟಾ ಎದುರು ಸೋಲು ಕಂಡರು.