2022ಕ್ಕೆ ಮಲೇರಿಯಾ ನಿರ್ಮೂಲನೆ ಗುರಿ

ಉಡುಪಿ: ದೇಶವನ್ನು 2030ಕ್ಕೆ ಹಾಗೂ ರಾಜ್ಯವನ್ನು 2025ಕ್ಕೆ ಮಲೇರಿಯಾ ಮುಕ್ತ ಮಾಡಲು ಸರ್ಕಾರ ಗುರಿ ನಿಗದಿ ಮಾಡಿದೆ. ಆರೋಗ್ಯ ಇಲಾಖೆಯು 2022ಕ್ಕೆ ಮಲೇರಿಯಾ ನಿರ್ಮೂಲನೆ ಮಾಡಿ, ಮತ್ತೆ 3 ವರ್ಷ ನಿಗಾ ವಹಿಸಲು ಉದ್ದೇಶಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಓಂಪ್ರಕಾಶ್ ಕಟ್ಟಿಮನಿ ಹೇಳಿದರು.
ಪತ್ರಿಕಾ ಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಮಲೇರಿಯಾ ದಿನಾಚರಣೆ ಹಾಗೂ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಲೇರಿಯಾ ಸಾಂಕ್ರಾಮಿಕ ರೋಗವಾಗಿದ್ದು, ಇದು ಹರಡಲು ಜನರ ನಿರ್ಲಕ್ಷೃದ ಪಾತ್ರ ದೊಡ್ಡದು. ಪರಿಸರ ಸ್ವಚ್ಛತೆ, ಚರಂಡಿಗಳ ದುರಸ್ತಿ, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೆ ರೋಗವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತಗಳು ಗಮನಹರಿಸಬೇಕು ಎಂದರು.
ಬಾವಿಗಳಲ್ಲಿ ಗಪ್ಪಿ ಮೀನು ಸಾಕುವುದು ಮಲೇರಿಯಾ ನಿಯಂತ್ರಣಕ್ಕೆ ಸಹಕಾರಿ. ಈ ಮೀನು ದಿನಕ್ಕೆ 150 ಸೊಳ್ಳೆ ಮೊಟ್ಟೆಗಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ಸೊಳ್ಳೆಗಳು 30 ದಿನದ ಜೀವಿತಾವಧಿಯಲ್ಲಿ 200 ಮೊಟ್ಟೆಗಳನ್ನು ಇಡುತ್ತವೆ ಎಂದು ಹೇಳಿದರು.

ವಾರ್ತಾಧಿಕಾರಿ ಖಾದರ್ ಶಾ ಕಾರ್ಯಾಗಾರ ಉದ್ಘಾಟಿಸಿದರು. ಪತ್ರಕರ್ತರ ಸಂಘದ ಕೋಶಾಧಿಕಾರಿ ದಿವಾಕರ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿಯಲ್ಲಿ ಜಾಸ್ತಿ: ವಲಸೆ ಕಾರ್ಮಿಕರ ಆಗಮನ, ಕಟ್ಟಡ ನಿರ್ಮಾಣ, ಮೀನುಗಾರಿಕೆ, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು, ಪ್ರವಾಸಿಗರು ಬರುವ ಕಾರಣ ರಾಜ್ಯದಲ್ಲಿ ಶೇ.70ರಷ್ಟು ಮಲೇರಿಯಾ ರೋಗಗಳು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಉಡುಪಿ ತಾಲೂಕಿನಲ್ಲಿ ಮಲೇರಿಯಾ ರೋಗಿಗಳ ಸಂಖ್ಯೆ ಜಾಸ್ತಿ ಇದ್ದು, ಗ್ರಾಮೀಣ ಭಾಗಕ್ಕಿಂತಲೂ ನಗರ ಪ್ರದೇಶದಲ್ಲಿ ಹೆಚ್ಚಾಗಿದೆ ಎಂದು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ್ ಭಟ್ ಹೇಳಿದರು.

2014ರಲ್ಲಿ 1639 ಮಲೇರಿಯಾ ಪ್ರಕರಣ ದಾಖಲಾಗಿದ್ದು, ನಿರಂತರ ಜನಜಾಗೃತಿಯ ಕಾರಣ 2018ರಲ್ಲಿ 210ಕ್ಕೆ ಇಳಿದಿದೆ. 2018ರಲ್ಲಿ 228 ಡೆಂೆ ಜ್ವರ ಪ್ರಕರಣ ದಾಖಲಾಗಿದ್ದು, 27 ಚಿಕನ್‌ಗುನ್ಯ ಪತ್ತೆಯಾಗಿದೆ. ಜಿಲ್ಲೆಯಲ್ಲಿ 586 ಮಂದಿ ಆನೆಕಾಲು ರೋಗ ಬಾಧಿತರಿದ್ದಾರೆ. 2006ರ ನಂತರ ಆನೆಕಾಲು ರೋಗ ಪ್ರಕರಣ ಕಂಡುಬಂದಿಲ್ಲ ಎಂದರು.

Leave a Reply

Your email address will not be published. Required fields are marked *