ಪ್ರತಿಭಟನೆ ನಡುವೆಯೂ ಬಹಿರಂಗ ಹರಾಜು

ಮಲೆ ಮಹದೇಶ್ವರಬೆಟ್ಟ: ಇಲ್ಲಿನ ಬೀದಿ ಬದಿ ಸಣ್ಣ ವ್ಯಾಪಾರಿಗಳ ಪ್ರತಿಭಟನೆಯ ನಡುವೆಯೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.
ಬೆಟ್ಟದಲ್ಲಿರುವ ಮಲೆಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯದ ಹೊರಗೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರೆ, ಒಳಗೆ ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರಮೂರ್ತಿ, ಅಧೀಕ್ಷಕ ಬಸವರಾಜು ಹಾಗೂ ಇತರರ ಸಮ್ಮುಖದಲ್ಲಿ ಬಹಿರಂಗ ಹರಾಜು ನಡೆಯಿತು.
ಕೆಲವು ವ್ಯಾಪಾರಿಗಳು ಪ್ರತಿಭಟನಾನಿರತರ ಕಣ್ಣು ತಪ್ಪಿಸಿ ಕಾರ್ಯಾಲಯದ ಕಾಂಪೌಂಡ್ ಜಿಗಿದು ಹರಾಜಿನಲ್ಲಿ ಪಾಲ್ಗೊಂಡರು. ಪ್ರತಿಭಟನಾನಿರತರು ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರೂ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.
ಬೆಟ್ಟದಲ್ಲಿರುವ ಅಂಗಡಿ ಮಳಿಗೆಗಳನ್ನು ಬಹಿರಂಗ ಹರಾಜಿನಲ್ಲಿ ಹಂಚಿಕೆ ಮಾಡಬಾರದೆಂದು ಒತ್ತಾಯಿಸಿ ಬೀದಿ ಬದಿ ವ್ಯಾಪಾರಿಗಳು ಪ್ರಾಧಿಕಾರದ ಕಚೇರಿ ಎದುರು ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ಗುರುವಾರವೂ ಮುಂದುವರಿಸಿದ್ದರು.
ಪ್ರಾಧಿಕಾರದ ಕಚೇರಿ ಎದುರು ಬೀದಿ ಬದಿ ವ್ಯಾಪಾರಿಗಳಿಗಾಗಿ 90 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಡಿಸೆಂಬರ್‌ನಲ್ಲಿ ಉದ್ಘಾಟಿಸಿದ್ದರು. ಈಗ ಅವುಗಳನ್ನು ಪ್ರಾಧಿಕಾರದ ಅಧಿಕಾರಿಗಳು ಗುರುವಾರ ನಡೆಯುವ ಬಹಿರಂಗ ಹರಾಜಿನಲ್ಲಿ ಹಂಚಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.
ಮಳಿಗೆ ಪಡೆಯಲು ಇಚ್ಛಿಸುವವರು 50 ಸಾವಿರ ರೂ. ಮುಂಗಡ ಹಣ ಪಾವತಿಸಿ ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡು ಪಡೆಯಬೇಕೆಂಬ ನಿಯಮ ರೂಪಿಸಿದ್ದಾರೆ. ಬೆಟ್ಟದಲ್ಲಿ ಹಲವು ವರ್ಷಗಳಿಂದ ಭಕ್ತರ ಕೈಯಿಗೆ ಕಟ್ಟುವ ಧಾರ, ಕತ್ತಿಗೆ ಹಾಕಿಕೊಳ್ಳುವ ತಾಯತ, ಮಹದೇಶ್ವರ ಸ್ವಾಮಿ ಚಿತ್ರವುಳ್ಳ ಡಾಲರ್, ವಿಭೂತಿ ಉಂಡೆ ಮತ್ತು ಗಟ್ಟಿಗಳು ಹಾಗೂ ಸಣ್ಣ ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡಿ ಜೀವನ ನಡೆಸುವ ನಮ್ಮಿಂದ ದೊಡ್ಡ ಮೊತ್ತದ ಮುಂಗಡ ಹಣ ಪಾವತಿಸಲು ಸಾಧ್ಯವಿಲ್ಲ ಎಂದರು.
ಮುಂಗಡ ಹಣ ಪಾವತಿಸುವ ಜತೆಗೆ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ಹಣವಂತ ವ್ಯಾಪಾರಿಗಳ ಜತೆ ಸ್ಫರ್ಧೆ ಮಾಡಿ ಮಳಿಗೆ ಹರಾಜು ಕೂಗುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ. ಸಣ್ಣ ಪುಟ್ಟ ವ್ಯಾಪಾರಿಗಳ ಪಟ್ಟಿ ತಯಾರಿಸಿ ಅವರಿಗೆ ಮಳಿಗೆಗಳನ್ನು ತಿಂಗಳ ಬಾಡಿಗೆ ಆಧಾರದಲ್ಲಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದ್ದರು.
ವ್ಯಾಪಾರಿಗಳ ಪ್ರತಿರೋಧದ ನಡುವೆ ಗುರುವಾರ ಮಳಿಗೆಗಳ ಬಹಿರಂಗ ಹರಾಜು ನಡೆಯಿತು. ಪ್ರತಿಭಟನೆಯಲ್ಲಿ ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋವಿಂದರಾಜು, ದೇವರಾಜು, ನಾಗಣ್ಣ, ಮಹೇಶ್, ಪ್ರದೀಪ್, ರಾಜ, ಶಿವಕುಮಾರ್, ಜಯಮ್ಮ, ರುದ್ರಮ್ಮ, ಮಹದೇವಮ್ಮ, ಸಾವಿತ್ರಮ್ಮ, ದುಂಡಮ್ಮ ಇತರರು ಪಾಲ್ಗೊಂಡಿದ್ದರು.