ಮಳೆಗೆ ನೆಲಸಮಗೊಂಡ ಭತ್ತದ ಬೆಳೆ

ಸಿದ್ದಾಪುರ: ತಾಲೂಕಿನಾದ್ಯಂತ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಬೆಳೆದು ನಿಂತ ಹಾಗೂ ಒಂದೆರಡು ದಿನದಲ್ಲಿ ಕಟಾವಿಗೆ ಸಿದ್ಧಗೊಂಡಿದ್ದ ಭತ್ತದ ಬೆಳೆ ನೆಲಸಮಗೊಂಡಿದೆ.

ತಾಲೂಕಿನ ಭತ್ತದ ಕಣಜ ಎಂದೇ ಗುರುತಿಸಿಕೊಂಡಿರುವ ಮನಮನೆ, ಕವಂಚೂರು, ಶಿರಳಗಿ, ನೆಜ್ಜೂರು, ಕಾನಗೋಡ, ಹಲಗೇರಿ,ಬೇಡ್ಕಣಿ, ಕೋಲಸಿರ್ಸಿ, ಅರೆಂದೂರು ಮತ್ತಿತರ ಕಡೆಗಳಲ್ಲಿ ಭತ್ತದ ಬೆಳೆ ಬೆಳೆದು ನಿಂತಿದೆ. ಇನ್ನೇನು ಕಟಾವು ಮಾಡುವುದಕ್ಕೆ ರೈತರು ತಯಾರಿ ನಡೆಸಿದ್ದರು. ಕೆಲವು ರೈತರು ಕಟಾವು ಮಾಡಿ ಹಾಗೆಯೇ ಗದ್ದೆಯಲ್ಲಿಟ್ಟಿದ್ದರು.

ನಾಟಿ ಹಾಗೂ ಬಿತ್ತನೆ ಮೂಲಕ ತಾಲೂಕಿನಲ್ಲಿ 5,600 ಹೆಕ್ಟೇರ್ ಕ್ಷೇತ್ರದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಅವುಗಳಲ್ಲಿ ಈಗಾಗಲೇ 200 ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆ ಕಟಾವು ಮಾಡಲಾಗಿದೆ. ಕಳೆದ ಐದಾರು ದಿನಗಳಲ್ಲಿ ಅಂದಾಜು 150 ಹೆಕ್ಟೇರ್ ಕ್ಷೇತ್ರದಲ್ಲಿ ರೈತರು ಭತ್ತದ ಬೆಳೆ ಕಟಾವು ಮಾಡಿದ್ದು, ಅವುಗಳೆಲ್ಲ ಭಾನುವಾರ ರಾತ್ರಿ ಸುರಿದ ಮಳೆಗೆ ಆಹುತಿಯಾಗಿದೆ. ಕೆಲವು ಬೆಳೆಗಾರರು ಬೆಳೆಯನ್ನು ಗದ್ದೆಯಿಂದ ಕಣಕ್ಕೆ ತಂದು ಒಣಗಿಸಲು ಮುಂದಾದರೆ, ಇನ್ನು ಕೆಲವರು ನೀರಿನಿಂದ ಮುಚ್ಚಿದ್ದ ಭತ್ತದ ಹುಲ್ಲನ್ನು ತೆಗೆದು ಹಾಳಿಯ ಮೇಲೆ ಇಟ್ಟಿದ್ದಾರೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದಲ್ಲಿ ನಾಟಿ ಮಾಡಿದ ಗದ್ದೆಯಲ್ಲಿ ನೀರು ನಿಂತು ಆಗ ಬೆಳೆ ಹಾನಿ ಆಗಿದೆ. ಈಗ ಪುನಃ ಮಳೆಗೆ ಬೆಳೆ ಹಾನಿ ಉಂಟಾಗಿದೆ. ಇದರಿಂದ ರೈತರ ಸ್ಥಿತಿ ಹೇಳತೀರದು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಅರೆಂದೂರು, ಕವಂಚೂರು ಭಾಗದ ಬೆಳೆಗಾರರು ಅಲವತ್ತುಕೊಂಡರು.

ಇನ್ನೂ ಮೂರ್ನಾಲ್ಕು ದಿನ ಮಳೆ ಬರುವ ಸಾಧ್ಯತೆ ಇರುವುದರಿಂದ ತಾಲೂಕಿನ ರೈತರು ಬೆಳೆದು ನಿಂತ ಭತ್ತದ ಬೆಳೆ ಕಟಾವು ಮಾಡುವುದು ಬೇಡ. ನಂತರ ಕಟಾವು ಮಾಡಬಹುದು. | ಪ್ರಶಾಂತ ಜಿ.ಎಸ್. ಸಹಾಯಕ ಕೃಷಿ ನಿರ್ದೇಶಕರು ಸಿದ್ದಾಪುರ

ಮಳೆ ಬಿದ್ದಿದ್ದರಿಂದ ಭತ್ತದ ಬೆಳೆ ಗದ್ದೆಯಲ್ಲಿ ಬಿದ್ದು ಹಾಸು ಹೋಗಿದ್ದು, ಅವುಗಳನ್ನು ಕಟಾವು ಮಾಡುವುದು ಕಷ್ಟವಾಗಿದೆ. ಅಲ್ಲದೆ, ಭತ್ತದ ಕಾಳು ಉದುರಿದ್ದರಿಂದ ತಂಬಾ ಹಾನಿ ಉಂಟಾಗಿದೆ.  | ಕನ್ನ ಬಂಗಾರ್ಯ ನಾಯ್ಕ  ಕೋಣೆಗದ್ದೆ ರೈತ