More

    ನಾಳೆಯಿಂದ ಮಲೆಗಳಲ್ಲಿ ಮದುಮಗಳು, ಕಲಾಗ್ರಾಮದಲ್ಲಿ ಫೆ. 29ರವರೆಗೆ ಆಯೋಜನೆ 

    ಬೆಂಗಳೂರು:  ರಾಷ್ಟ್ರಕವಿ ಕುವೆಂಪು ವಿರಚಿತ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಆಧಾರಿತ ನಾಟಕ ಪ್ರದರ್ಶನಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಕಲಾಗ್ರಾಮದಲ್ಲಿ ಜ.20ರಿಂದ ಫೆ.29ರವರೆಗೆ ಪ್ರದರ್ಶನಗೊಳ್ಳಲಿದೆ.

    ರಾಷ್ಟ್ರೀಯ ನಾಟಕ ಶಾಲೆ (ಎನ್​ಎಸ್​ಡಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಒಂದೂವರೆ ತಿಂಗಳು ನಡೆಯುವ ಪ್ರದರ್ಶನಕ್ಕೆ ಜ.20ರ ರಾತ್ರಿ 8 ಗಂಟೆಗೆ ಚಾಲನೆ ದೊರೆಯಲಿದೆ. ನಾಟಕ ಫೆ.29ರವರೆಗೆ 24 ಪ್ರದರ್ಶನಗಳನ್ನು ಕಾಣಲಿದೆ. ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ರಾತ್ರಿ. 8.30ರಿಂದ ಬೆಳಗ್ಗೆ 5.30ರವರೆಗೆ 9 ಗಂಟೆ ನಿರಂತರ ಪ್ರದರ್ಶನ ನಡೆಯಲಿದೆ. ಆ ಮೂಲಕ ಸಿ. ಬಸವಲಿಂಗಯ್ಯ ನಿರ್ದೇಶನದ ಈ ಪ್ರಯೋಗ 109 ಪ್ರದರ್ಶನಗಳನ್ನು ಪೂರೈಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬದುಜಿನಲ್ಲಿ ಹಾಸಹೊಕ್ಕಾಗಿರುವ ಸೌಂದರ್ಯ, ಪ್ರಣಯ, ಪರಿಸರ ಮತ್ತು ದುರಂತಗಳು ನಾಲ್ಕು ವೇದಿಕೆಗಳಲ್ಲಿ ಮೂಡಿಬರಲಿದೆ ಎಂದರು. ನಾಟಕ ರಚನಕಾರ ಕೆ.ವೈ. ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಉಪಸ್ಥಿತರಿದ್ದರು.

    ಶತಕ ಸಂಭ್ರಮ

    ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಮೈಸೂರಿನ ರಂಗಾಯಣ ತಂಡ 2010ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತ್ತು. ಈವರೆಗೆ 85 ಪ್ರದರ್ಶನಗಳನ್ನು ಪೂರೈಸಿದೆ. ಫೆ.14ರಂದು 100ನೇ ಪ್ರಯೋಗ ನಡೆಯಲಿದೆ ಎಂದು ಎನ್​ಎಸ್​ಡಿ ನಿರ್ದೇಶಕ ಸಿ. ಬಸವಲಿಂಗಯ್ಯ ತಿಳಿಸಿದರು.

    ಸರ್ಕಾರದಿಂದ 30 ಲಕ್ಷ ರೂ. ಧನಸಹಾಯ

    ಈ ನಾಟಕ ವೀಕ್ಷಿಸಿದವರಲ್ಲಿ ಬಹುತೇಕರು ಯುವಜನರಾಗಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ 150 ರೂ. ಟಿಕೆಟ್ ದರ ನಿಗದಿಪಡಿಸ ಲಾಗಿದೆ. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಹಳೆಯ ವಿದ್ಯಾರ್ಥಿಗಳು ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ 75 ನಟರು ನಾಟಕದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಇವರೆಲ್ಲರಿಗೂ ವಸತಿ, ಊಟ, ಗೌರವಧನ, ರಂಗತಾಲೀಮು, ಸೆಟ್​ಗಳ ಜೋಡಣೆ, ಧ್ವನಿ-ಬೆಳಕಿನ ಸಂಯೋಜನೆ ಕಲ್ಪಿಸಬೇಕಿದೆ. ಸರ್ಕಾರ 30 ಲಕ್ಷ ರೂ. ಧನಸಹಾಯ ನೀಡಿದ್ದು, ಟಿಕೆಟ್ ಮಾರಾಟದಿಂದ ಬರುವ ಹಣದಲ್ಲಿ ಉಳಿದ ವೆಚ್ಚ ಭರಿಸಲಾಗುವುದು ಎಂದು ರಂಗಪ್ಪ ತಿಳಿಸಿದರು.

    ಪ್ರದರ್ಶನದ ವಿವರ

    • ಜ.20ರಿಂದ ಫೆ.29ರವರೆಗೆ ರಂಗ ಪ್ರಯೋಗ
    • ರಾತ್ರಿ 8.30ರಿಂದ ಬೆಳಗ್ಗೆ 5.30ರವರೆಗೆ ಪ್ರದರ್ಶನ
    • ಬೆಂಗಳೂರು ವಿವಿ ಆವರಣದ ಕಲಾಗ್ರಾಮ
    • ಟಿಕೆಟ್ ದರ 249 ರೂ.
    • ವಿದ್ಯಾರ್ಥಿಗಳಿಗೆ 150 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts