ಪಡಿತರ ಅಕ್ಕಿ ಅಕ್ರಮ ಸಾಗಣೆ: ಪುರಸಭೆ ಸದಸ್ಯನ ಬಂಧನ

ದಾವಣಗೆರೆ: ಹರಿಹರ ತಾಲೂಕಿನ ಮಲೇಬೆನ್ನೂರಿನಿಂದ 17ಟನ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪುರಸಭೆ ಸದಸ್ಯ ಅಬ್ದುಲ್ ಲತೀಫ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಸೋಮವಾರ ರಾತ್ರಿ ಬಂಧಿಸಿ ಲಾರಿ, ಅಕ್ಕಿ ಜಪ್ತು ಮಾಡಲಾಗಿದೆ.

ಮಲೇಬೆನ್ನೂರು ನಿವಾಸಿಗಳಾದ ಅಬ್ದುಲ್ ಲತೀಫ್, ಇಸಾರ್ ಅಲಿ, ರಜಾಕ್, ನಾದಿರ್ ಬಂಧಿತ ಆರೋಪಿಗಳು.

ಮಲೇಬೆನ್ನೂರಿನ ನಿಟ್ಟೂರು ರಸ್ತೆ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿ ಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಪಿಐ ಟಿ.ವಿ.ದೇವರಾಜ್ ಹಾಗೂ ಪಿಎಸ್‌ಐ ಎಂ.ವಿ.ಮೇಘರಾಜ್ ನೇತೃತ್ವದ ಎರಡು ಪ್ರತ್ಯೇಕ ತಂಡಗಳು ದಾಳಿ ಮಾಡಿದ್ದರು.

ಅಬ್ದುಲ್ ಲತೀಫ್ ಮಲೇಬೆನ್ನೂರಿನ 1ವಾರ್ಡ್‌ಗೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತ ಪುರಸಭೆ ಸದಸ್ಯ. ಪುರಸಭೆ ಸದಸ್ಯರೊಬ್ಬರು ಪಡಿತರ ಅಕ್ಕಿ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.