ಕುರಿ ಕಳ್ಳತನಕ್ಕೆ ಬಂದವನ ಕೊಲೆ

ಮಲೇಬೆನ್ನೂರು: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಮೂಗಿನಗುಂದಿ ಹಾಗೂ ಜಿ.ಟಿ.ಕಟ್ಟೆ ನಡುವಿನ ಅಡಕೆ ತೋಟದಲ್ಲಿ ಕುರಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯ ರುಂಡವನ್ನು ಕುರಿಗಾಹಿ ಕತ್ತರಿಸಿ ಕೊಲೆ ಮಾಡಿದ್ದಾನೆ.

ಮಲೇಬೆನ್ನೂರು ನಿವಾಸಿ ಗುಬ್ಬಿ ಚಮನ್ ಸಾಬ್ (48) ಕೊಲೆಯಾದ ವ್ಯಕ್ತಿ. ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಚಿಕ್ಕೋಡಿ ತಾಲೂಕು ಕೋಗನಹಳ್ಳಿಯ ಕುರಿಗಾಹಿ ಅರ್ಜುನಪ್ಪ ಹತ್ಯೆ ಮಾಡಿದ ಆರೋಪಿ.

ಜಿ.ಟಿ. ಕಟ್ಟೆ ಸಮೀಪದ ಗೌಡರ ಶೇಖರಪ್ಪನವರ ಅಡಕೆ ತೋಟದಲ್ಲಿ ವಾರದ ಹಿಂದಷ್ಟೆ ಸಾಕಿದ ಕುರಿಗಳನ್ನು ಅರ್ಜುನಪ್ಪ ಇರಿಸಿದ್ದ. ಆತನ ಜತೆ ಮಕ್ಕಳಿದ್ದರು. ಕುರಿ ಕಳ್ಳತನಕ್ಕೆ ಬಂದಿದ್ದ ಎನ್ನಲಾದ ಚಮನ್‌ಸಾಬ್, ಕಾವಲಿಗಿದ್ದ ಕುರಿಗಾಹಿಗಳನ್ನು ಕಂಡು ಓಡಿದ್ದಾನೆ. ಅಟ್ಟಿಸಿಕೊಂಡು ಬಂದ ಅರ್ಜುನಪ್ಪ, ಮಚ್ಚಿನಿಂದ ಚಮನ್‌ಸಾಬ್‌ನ ರುಂಡವನ್ನು ಛೇದಿಸಿದ್ದಾನೆ. ಶನಿವಾರ ಬೆಳಗ್ಗೆ ಮಲೆಬೆನ್ನೂರು ಪೊಲೀಸರಿಗೆ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ಎಎಸ್ಪಿ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ಚಮನ್‌ಸಾಬ್ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕುರಿ ಕಳ್ಳತನದ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *