ಉಕ್ಕಡಗಾತ್ರಿ ದೇಗುಲ ಭಾಗಶಃ ಜಲಾವೃತ

ಮಲೇಬೆನ್ನೂರು: ಕಳೆದ ಎರಡು ದಿನಗಳಿಂದ ತುಂಗಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಅಂಗಡಿವರೆಗೂ ನೀರು ನಿಂತಿದೆ.

ದೇಗುಲದ ಕೆಳಭಾಗದಲ್ಲಿ ನದಿಗೆ ಹೊಂದಿಕೊಂಡಂತಿರುವ ಅಂಗಡಿ ಶೆಡ್‌ಗಳು, ಜವಳ ಮಂದಿರ, ಸ್ಥಾನಘಟ್ಟಗಳು ಸಂಪೂರ್ಣ ಮುಳುಗಡೆಯಾಗಿವೆ. ಪ್ರತಿನಿತ್ಯ ನೂರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ಅಮಾವಾಸ್ಯೆ ಹಾಗೂ ಜಾತ್ರೆ, ಶಿವರಾತ್ರಿಗಳಂದು ಸಾವಿರಾರು ಭಕ್ತರು ಹೊಳೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ.

ಹೊಳೆ ಭರ್ತಿಯಾಗಿದ್ದು, ಸ್ನಾನ ಮಾಡುವ ಭಕ್ತರಿಗೆ ಮುನ್ನೆಚ್ಛರಿಕೆ ಕ್ರಮವಾಗಿ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಇದರಿಂದ ಭಯದ ವಾತಾವರಣ ಭಕ್ತರಲ್ಲಿದೆ.

ಬೆಳೆ ಜಲಾವೃತ: ನದಿ ತಟದ ನೂರಾರು ಎಕರೆ ಸಂಪೂರ್ಣ ಜಲಾವೃತವಾಗಿವೆ. ಹಲವು ಪಂಪ್‌ಸೆಟ್‌ಗಳು ಮುಳುಗಡೆಯಾಗಿವೆ. ಭತ್ತದ ಗದ್ದೆ, ತರಕಾರಿ, ಮೆಕ್ಕೆಜೋಳ, ಜೋಳದ ಬೆಳೆಯಲ್ಲಿ 4-5 ಅಡಿ ನೀರು ನಿಂತಿದೆ. ಹಲವೆಡೆ ವಾರದ ಹಿಂದೆ ನಾಟಿ ಮಾಡಿದ ಗದ್ದೆಗಳಿಗೆ ನದಿ ನೀರು ನುಗ್ಗಿದೆ ಎಂದು ರೈತರು ಗೋಳಾಡುತ್ತಿದ್ದರು.

ರಸ್ತೆ ಸಂಪರ್ಕ ಕಡಿತ: ಫತೇಪುರ್- ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆ ಸಂಪೂರ್ಣ ಮುಳುಗಿದ್ದು, ಹರಿಹರ ಮಾರ್ಗವಾಗಿ ಉಕ್ಕಡಗಾತ್ರಿ ತಲುಪುವ ಮಾರ್ಗ ಬಂದ್ ಆಗಿದೆ. ಸಧ್ಯ ಉಕ್ಕಡಗಾತ್ರಿಗೆ ಹೋಗಲು ಎಂಟು ಕಿ.ಮೀ ಸುತ್ತಿಕೊಂಡು ಬರಬೇಕಿದೆ. ಮಳೆ ಹೆಚ್ಚಾದಾಗ ಪ್ರತಿ ಬಾರಿ ಈ ಸಮಸ್ಯೆಯಾಗುತ್ತದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು ಮತ್ತು ಶಾಸಕರಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ದೂರಿದ್ದಾರೆ.

ನದಿ ಪಾತ್ರದಲ್ಲಿ ಎಚ್ಚರ: ನದಿ ಯಾವ ಸಮಯದಲ್ಲಾದರೂ ಅಪಾಯ ಮಟ್ಟ ತಲುಪಬಹುದಾಗಿದ್ದು ನದಿ ಪಾತ್ರದಲ್ಲಿ ರೈತರು, ಜನರು ತೆರಳದಂತೆ ನದಿ ಅಕ್ಕ-ಪಕ್ಕದ ಗ್ರಾಮಗಳಾದ ಉಕ್ಕಡಗಾತ್ರಿ, ನಂದಿಗುಡಿ, ಗೋವಿನಹಾಳು ಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗುತ್ತಿದೆ. ನದಿ ಪಾತ್ರಕ್ಕೆ ಹೋಗುವುದು, ಯುವಕರು ಈಜಲು ತೆರಳದಂತೆ ಮಲೇಬೆನ್ನೂರು ಪಿಎಸ್‌ಐ ಮೇಘರಾಜ್ ಮನವಿ ಮಾಡಿದರು.

Leave a Reply

Your email address will not be published. Required fields are marked *