ಝಾಕಿರ್​ ನಾಯ್ಕ್​ನನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ: ಮಲೇಷ್ಯಾ ಪಿಎಂ

ಪುತ್ರಜಯ: ವಿವಾದಿತ ಇಸ್ಲಾಂ ಬೋಧಕ ಝಾಕಿರ್​ ನಾಯ್ಕ್​ ನನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಮಲೇಷ್ಯಾದ ಪ್ರಧಾನ ಮಂತ್ರಿ ಮಹತಿರ್ ಮೊಹಮದ್ ಸ್ಪಷ್ಟಪಡಿಸಿದ್ದಾರೆ.

52 ವರ್ಷ ವಯಸ್ಸಿನ ಝಾಕಿರ್​ ನಾಯ್ಕ್​ ನಮ್ಮ ದೇಶದಲ್ಲಿ ಯಾವುದೇ ತೊಂದರೆ ಉಂಟು ಮಾಡಿಲ್ಲ, ಜತೆಗೆ ಆತ ಮಲೇಷ್ಯಾದ ಶಾಶ್ವತ ಪೌರತ್ವ ಪಡೆದಿರುವುದರಿಂದ ಆತನನ್ನು ಭಾರತಕ್ಕೆ ಹಸ್ತಾಂತರಿಸುಲು ಸಾಧ್ಯವಿಲ್ಲ ಎಂದು ಮಹತಿರ್​ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದ್ವೇಷ ಭಾಷಣ, ಉಗ್ರವಾದಕ್ಕೆ ಪ್ರಚೋದನೆ ನೀಡುವುದು ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಝಾಕಿರ್​ ನಾಯ್ಕ್​ 2016ರಲ್ಲಿ ಭಾರತವನ್ನು ತೊರೆದಿದ್ದ. ಆ ನಂತರ ಆತ ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದ. ಆ ನಂತರ ಮಲೇಷ್ಯಾ ಝಾಕಿರ್​ ನಾಯ್ಕ್​ಗೆ ಶಾಶ್ವತ ಪೌರತ್ವವನ್ನು ನೀಡಿತ್ತು.

ಈ ಹಿನ್ನೆಲೆಯಲ್ಲಿ ಝಾಕಿರ್​ ನಾಯ್ಕ್​ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಮಲೇಷ್ಯಾಗೆ ಮನವಿ ಮಾಡಿತ್ತು. 2 ದಿನಗಳ ಹಿಂದೆ ಝಾಕಿರ್​ ನಾಯ್ಕ್​ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಆತನನ್ನು ವಾಪಸ್ ಕರೆತರಲಾಗುತ್ತಿದೆ ಎಂದು ಸುದ್ದಿಯಾಗಿತ್ತು. ಆ ನಂತರ ಸುದ್ದಿಯ ಕುರಿತು ಹೇಳಿಕೆ ನೀಡಿದ್ದ ಝಾಕಿರ್​ ನಾಯ್ಕ್​ ತಾನು ಭಾರತಕ್ಕೆ ಹಿಂದಿರುಗುವುದಿಲ್ಲ ಎಂದು ತಿಳಿಸಿದ್ದ. (ಏಜೆನ್ಸೀಸ್​)