ಕಳೆದ ವರ್ಷ ಮಲಯಾಳಂ ಚಿತ್ರರಂಗ ಸಿನಿಮಾಗಳಿಂದ ಮಾತ್ರವಲ್ಲದೇ ಮೀಟೂ ವಿವಾದಗಳಿಂದಲೂ ಹೆಚ್ಚು ಸದ್ದು ಮಾಡಿತ್ತು. ಬ್ಯಾಕ್ ಟು ಬ್ಯಾಕ್ ಚಿತ್ರಗಳು ಹಿಟ್ ಆದ ರೀತಿಯಲ್ಲೇ, ಪೊಲೀಸ್ ಠಾಣೆಯಲ್ಲಿ ದೂರುಗಳೂ ದಾಖಲಾಗಿದ್ದವು. ಈ ಹೊಸ ವರ್ಷಕ್ಕಾದರೂ ಈ ವಿವಾದ ನಿಲ್ಲುತ್ತಾ ಅಂದುಕೊಂಡರೆ, ಆ ಮಾತು ಸುಳ್ಳಾಗಿದೆ. ಇದೀಗ “ಸೆಕ್ಸಿ ದುರ್ಗ’, “ಚೋಳ’, “ವಳಕ್ಕು’ ಚಿತ್ರಗಳ ನಿರ್ದೇಶಕ ಸನಾಲ್ ಕುಮಾರ್ ಸಸಿಧರನ್ ವಿರುದ್ಧ 40ಕ್ಕೂ ಅಧಿಕ ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಂಜು ವಾರಿಯರ್ ದೂರು ದಾಖಲಿಸಿದ್ದಾರೆ.
ನಿರ್ದೇಶಕ ವಿನಾ ಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆಂದು ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಸನಾಲ್ ಅಮೆರಿಕದಲ್ಲಿದ್ದು, ವಿಚಾರಣೆಗಾಗಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಕೊಚ್ಚಿ ಪೊಲೀಸರು ಅಲ್ಲಿನ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಹಾಗಂತ ಇದು ಮಂಜು ವಾರಿಯರ್, ಸನಲ್ ವಿರುದ್ಧ ನೀಡಿರುವ ಎರಡನೇ ದೂರು.
2020ರಲ್ಲಿ ಸನಲ್ ನಿರ್ದೇಶಿಸಿದ್ದ ಚಿತ್ರದಲ್ಲಿ ಮಂಜು ವಾರಿಯರ್ ನಟಿಸಿದ್ದರು. ಆಗಿನಿಂದಲೂ ಮಂಜು ವಾರಿಯರ್ ಜತೆ ಸಲುಗೆ ಬೆಳೆಸಿಕೊಳ್ಳಲು ಸನಲ್ ಪ್ರಯತ್ನಿಸುತ್ತಿದ್ದು, ಅದಕ್ಕೆ ನಟಿ ಒಪ್ಪದಿದ್ದಾಗ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿಯೇ 2022ರಲ್ಲಿ ಮಂಜು ವಾರಿಯರ್, ಸನಲ್ ವಿರುದ್ಧ ದೂರು ದಾಖಲಿಸಿದ್ದರು. ಆಗ ಬಂಧನಕ್ಕೊಳಗಾಗಿದ್ದ ಸನಲ್ ನಂತರ ಬೇಲ್ ಪಡೆದು ಹೊರಬಂದಿದ್ದರು.