50 ಗಿಡ ನೆಟ್ಟು 50ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ಮಳವಳ್ಳಿ: ಐವತ್ತು ವರ್ಷಗಳ ಹಿಂದೆ ವಿವಾಹವಾಗಿದ್ದ ದೇವಸ್ಥಾನದ ಆವರಣದಲ್ಲಿ 50 ವಿವಿಧ ಜಾತಿಯ ಗಿಡಗಳನ್ನು ನೆಡುವುದರ ಮೂಲಕ ರೈತ ದಂಪತಿ ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

ಮದ್ದೂರು ತಾಲೂಕಿನ ತೊರೆ ಬೊಮ್ಮನಹಳ್ಳಿ ಗ್ರಾಮದ ತಿಮ್ಮಯ್ಯ ಹಾಗೂ ಸರೋಜಮ್ಮ ದಂಪತಿ ಪಟ್ಟಣದ ಹೊರವಲಯದಲ್ಲಿರುವ ಮಾರೇಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ 50 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರ ಸವಿ ನೆನಪಿಗಾಗಿ ಬುಧವಾರ ತಮ್ಮ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ದೇಗುಲದ ಆವರಣದಲ್ಲಿ 50 ವಿವಿಧ ಜಾತಿಯ ಗಿಡಗಳನ್ನು ನೆಟ್ಟು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

ರೈತ ತಿಮ್ಮಯ್ಯ ಮಾತನಾಡಿ, ಪ್ರಸ್ತುತ ಮರಗಳ ಹನನದಿಂದ ಮಳೆ ಕಡಿಮೆಯಾಗುತ್ತಿದ್ದು, ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ. ಇದರ ನಿವಾರಣೆಗಾಗಿ ನಮ್ಮ ಕುಟುಂಬದ ಸದಸ್ಯರೆಲ್ಲರೂ ಒಗ್ಗೂಡಿ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಷಿ ಹೊಣೆಗಾರಿಕೆಯನ್ನು ನಿರ್ವಹಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಸಾಲುಮರ ನಾಗರಾಜು ಸೇರಿದಂತೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *