More

    ಮಳವಳ್ಳಿ ಬಂದ್ ಬಹುತೇಕ ಯಶಸ್ವಿ

    ಮಳವಳ್ಳಿ: ನೀರಿನ ಕೊರತೆಯಿದ್ದರೂ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಮಂಗಳವಾರ ಜೆಡಿಎಸ್, ಬಿಜೆಪಿ, ಬಿಎಸ್‌ಪಿ ಹಾಗೂ ವಿವಿಧ ಸಂಘಟನೆಗಳಿಂದ ಮಂಗಳವಾರ ಕರೆ ನೀಡಿದ್ದ ಮಳವಳ್ಳಿ ತಾಲೂಕು ಬಂದ್‌ಗೆ ಬಹುತೇಕ ಯಶಸ್ವಿಯಾಗಿದ್ದು, ಹೋಬಳಿ ಕೇಂದ್ರಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

    ಬೆಳಗಿನಿಂದಲೇ ಪಟ್ಟಣದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಬೀದಿಗಿಳಿದ ಹೋರಾಟಗಾರರು, ಬೈಕ್‌ಗಳಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಪ್ರತಿಭಟನೆಗೆ ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅಂಗಡಿ ಮುಂಕಟ್ಟುಗಳು ಬಾಗಿಲು ತೆರೆದಿರಲಿಲ್ಲ. 10 ಗಂಟೆಯ ನಂತರ ಪ್ರತಿಭಟನಾಕಾರರು ತೆರಳಿ, ತೆರೆದಿದ್ದ ಬ್ಯಾಂಕ್‌ಗಳ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮುಚ್ಚಿಸಿದರು. ಖಾಸಗಿ ಶಾಲಾ ಕಾಲೇಜುಗಳಿಗೆ ಬಂದ್‌ಗೆ ಸಹಕರಿಸುವಂತೆ ಒತ್ತಾಯಿಸಿದಾಗ ರಜೆ ಘೋಷಣೆ ಮಾಡಲಾಯಿತು. ಸರ್ಕಾರಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

    ಅನಂತ್ ರಾಮ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅರಬೆತ್ತಲೆಯಾಗಿ ರಸ್ತೆಯಲ್ಲಿ ಉರುಳಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಸಿಕೊಂಡು ಖಾಲಿ ಕೊಡ ಮುಂದಿಟ್ಟುಕೊಂಡು ಕಾವೇರಿ ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಧರಣಿ ಮುಂದುವರಿಸಿದರು.

    ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಕಾವೇರಿ ನೀರಿನ ವಿಚಾರವಾಗಿ ಕಳೆದ 24 ದಿನಗಳಿಂದ ಹೋರಾಟ ನಡೆಯುತ್ತಿದ್ದು, ನಮ್ಮ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಉಲ್ಬಣವಾಗುತ್ತಿದ್ದರೂ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಕಾಂಗ್ರೆಸ್‌ನವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಸಹಕಾರ ಬೇಕೆಂಬ ಉದ್ದೇಶದಿಂದ ರಾಜಕೀಯವಾಗಿ ಒಂದಾಣಿಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳ ಸಂಗ್ರಹದ ವಾಸ್ತವ ವರದಿಯನ್ನು ಪ್ರಾಧಿಕಾರಕ್ಕೆ ವರದಿ ನೀಡುವಲ್ಲಿ ವಿಫಲವಾಗುವ ಮೂಲಕ ರೈತರ ಹಿತವನ್ನು ಬಲಿಕೊಟ್ಟಿದೆ ಎಂದು ಆರೋಪಿಸಿದರು.

    ಬಿಎಸ್‌ಪಿ ರಾಜ್ಯ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಶತಮಾನಗಳಿಂದಲೂ ಮಳೆ ಕೊರತೆಯಾದ ದಿನಗಳಲ್ಲಿ ಎರಡು ರಾಜ್ಯಗಳ ನಡುವೆ ನೀರಿಗಾಗಿ ಹೋರಾಟ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಶಾಶ್ವತ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.
    ಧರಣಿನಿರತರಿಂದ ಮನವಿ ಸ್ವೀಕರಿಸಲು ಸ್ಥಳಕ್ಕೆ ಶಿರಸ್ತೇದಾರ್ ಗುರುಪ್ರಸಾದ್ ಆಗಮಿಸಿದಾಗ ತಹಸೀಲ್ದಾರ್ ಬರಬೇಕೆಂದು ಹೋರಾಟಗಾರರು ಒತ್ತಾಯಿಸಿದರು. ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ತಹಸೀಲ್ದಾರ್ ಲೊಕೇಶ್‌ಗೆ ಕರೆಮಾಡಿ ನೀವೇ ಬಂದು ಮನವಿ ಪಡೆಯುವಂತೆ ಕೋರಿದರು. ಸಭೆಯಲ್ಲಿದ್ದೇನೆ ನಮ್ಮ ಅಧೀನ ಅಧಿಕಾರಿಯನ್ನು ಕಳುಹಿಸಿದ್ದು, ಮನವಿ ನೀಡಿದರೆ ಸರ್ಕಾರಕ್ಕೆ ರವಾನಿಸುವುದಾಗಿ ಉತ್ತರಿಸಿದರು. ಇದರಿಂದ ಕೆಂಡಮಂಡಲವಾದ ಮಾಜಿ ಶಾಸಕರು, ನಾವೇನು ನಮ್ಮ ಮನೆ ಕೆಲಸಕ್ಕಾಗಿ ಹೋರಾಟ ಮಾಡುತ್ತಿಲ್ಲ. ನಾನೂ ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿದ್ದು, ಜನರ ಹಿತಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬಾರದಿದ್ದರೆ ತಾಲೂಕು ಆಡಳಿತದ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

    ಕೂಡಲೇ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮನವಿ ಸ್ವೀಕರಿಸಿದರು. ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಪಂ ಮಾಜಿ ಸದಸ್ಯರಾದ ಹನುಮಂತು, ರವಿ, ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಚಿಕ್ಕರಾಜು, ಜಯಕರ್ನಾಟಕ ತಾಲೂಕು ಅಧ್ಯಕ್ಷ ನಾಗೇಶ್, ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ನೂರುಲ್ಲಾ, ಜಯಸಿಂಹ, ಕುಮಾರ, ನಾಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts