ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಮೂರು ದಶಕಗಳ ಸಿನಿಮಾಜೀವನದಲ್ಲಿ “ಧ್ವನಿ’, “ಕೋತಿರಾಜ್’ ಸೇರಿ 15ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ ಖ್ಯಾತಿ ಸೆಬಾಸ್ಟಿಯನ್ ಡೇವಿಡ್ಗೆ ಸಲ್ಲುತ್ತದೆ. ಇದೀಗ ಅವರು “ಪೆನ್ಡ್ರೈವ್’ ಕಥೆಯೊಂದಿಗೆ ವಾಪಸ್ಸಾಗಿದ್ದು, ಇತ್ತೀಚೆಗಷ್ಟೆ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಗಿದೆ. ಜತೆಗೆ ಡಬ್ಬಿಂಗ್ ಕೂಡ ಮುಕ್ತಾಯವಾಗಿದ್ದು, ಸದ್ಯ ಚಿತ್ರತಂಡ ರಿಲೀಸ್ಗೆ ಸಿದ್ಧತೆ ನಡೆಸುತ್ತಿದೆ.
ಇದೊಂದು ವಿಭಿನ್ನ ಕಥಾಹಂದರದ ಚಿತ್ರವಾಗಿದ್ದು ಮಾಲಾಶ್ರೀ, ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಮತ್ತು ಕಿಶನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಚಾಮುಂಡಿ’, “ದುರ್ಗಿ’, “ಮಾರಕಾಸ್ತ್ರ’ ಸೇರಿ ಹಲವು ಆ್ಯಕ್ಷನ್ ಪ್ರಧಾನ ಚಿತ್ರಗಳಲ್ಲಿ ಮಿಂಚಿರುವ ಮಾಲಾಶ್ರೀ, “ಪೆನ್ಡ್ರೈವ್’ನಲ್ಲೂ ಅಂಥದ್ದೇ ರೀತಿಯ ರಫ್ ಆ್ಯಂಡ್ ಟಫ್ ಪಾತ್ರದಲ್ಲಿ ನಟಿಸಲಿದ್ದಾರೆ. ಜತೆಗೆ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಪ್ರಮುಖ ತಾರಾಗಣದಲ್ಲಿದ್ದಾರೆ.