More

    ಮಲಪ್ರಭೆಯಲ್ಲಿ ಮಿಂದೆದ್ದ ಜನಸಾಗರ

    ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿಯಲ್ಲಿ ಬುಧವಾರ ಮಕರ ಸಂಕ್ರಮಣ ನಿಮಿತ್ತ ಪುಣ್ಯಸ್ನಾನ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಧಾರವಾಡ, ಬೆಳಗಾವಿ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಹಸಾರು ಭಕ್ತರು ನದಿಯಲ್ಲಿ ಎಳ್ಳು ಮಿಶ್ರಿತ ಅರಿಶಿಣ ಮೈಗೆ ಹಚ್ಚಿಕೊಂಡು ಪುಣ್ಯಸ್ನಾನ ಮಾಡಿದರು. ನಂತರ ಗಂಗಾದೇವಿಗೆ ಪೂಜೆ ಸಲ್ಲಿಸಿ, ಮನೆಯಿಂದ ತಂದಿದ್ದ ಆಹಾರ ಪದಾರ್ಥ, ಸೀರೆ, ಕುಪ್ಪಸ ಇಟ್ಟು ಭಕ್ತಿಯಿಂದ ನೈವೇದ್ಯ ಅರ್ಪಿಸಿದರು.

    ನದಿಯಲ್ಲಿ ಪುಣ್ಯಸ್ನಾನ ಮಾಡಿ ನದಿ ಮಧ್ಯೆ ಇರುವ ಶರಣೆ ಗಂಗಾಂಬಿಕೆ ಐಕ್ಯಮಂಟಪಕ್ಕೆ ತೆರಳಿ ದರ್ಶನ ಪಡೆದರು. ಐಕ್ಯಮಂಟಪದ ಬಳಿ ಇರುವ ವಿಠ್ಠಲ-ರುಕ್ಮಿಣಿ ದೇವಸ್ಥಾನ, ಶ್ರೀ ಅಶ್ವತ್ಥ-ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಮನೆಯಿಂದ ತಂದಿದ್ದ ಸಜ್ಜಿ ರೊಟ್ಟಿ, ಮೊಸರು, ಗುರೆಳ್ಳ್ಳು, ಶೇಂಗಾ ಚಟ್ನಿ, ಹುಳಿಬಾನ, ಬದನೆ ಎಣ್ಣೆಗಾಯಿ, ಮಾದೇಲಿ, ಅನ್ನ ಸೇರಿ ತರಹೇವಾರಿ ಖಾದ್ಯಗಳನ್ನು ಕುಟುಂಬ ಸಮೇತರಾಗಿ ಮರಗಳ ನೆರಳಿನಲ್ಲಿ ಒಟ್ಟಿಗೆ ಕುಳಿತು ಸವಿದರು.

    ಅಲಂಕೃತ ಎತ್ತಿನ ಚಕ್ಕಡಿ, ಟ್ರಾೃಕ್ಟರ್, ಕಾರ್, ಬೈಕ್, ಬಸ್ ಸೇರಿ ಮತ್ತಿತರ ವಾಹನಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಶ್ರೀಕ್ಷೇತ್ರವೆಲ್ಲ ಬೆಳಗ್ಗೆಯಿಂದ ರಾತ್ರಿ ತನಕವು ಜನಜಂಗುಳಿಯಿಂದ ತುಂಬಿತ್ತು.
    ಭಕ್ತರ ವಾಹನಗಳಿಗಾಗಿ ರಸ್ತೆ ಪಕ್ಕದ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಿತ್ತೂರು ಪೊಲೀಸ್ ಠಾಣೆ ವತಿಯಿಂದ ಅಗತ್ಯ ಭದ್ರತೆ ಒದಗಿಸಲಾಗಿತ್ತು. ನದಿ ತುಂಬಿರುವುದರಿಂದ ಸ್ನಾನಕ್ಕೆ ಬರುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ವತಿಯಿಂದ ನದಿಯ ಎರಡೂ ಬದಿಯಲ್ಲಿ ದೋಣಿಗಳನ್ನಿಟ್ಟು ನುರಿತ ಈಜುಗಾರರ ವ್ಯವಸ್ಥೆ ಮಾಡಲಾಗಿತ್ತು.

    ಸ್ಥಳೀಯ ಬಸವೇಶ್ವರ ಧಾರ್ಮಿಕ ಸೇವಾ ಸಂಘದ ಸದಸ್ಯರು ಪ್ರತಿವರ್ಷದಂತೆ ಈವರ್ಷವು ಶ್ರೀಕ್ಷೇತ್ರದಲ್ಲಿ ಸ್ವಯಂ ಸೇವೆ ಸಲ್ಲಿಸಿ, ಭಕ್ತರಿಗೆ ಅನುಕೂಲ ಕಲ್ಪಿಸಿದರು. ಶರಣೆ ಗಂಗಾಂಬಿಕಾ ಮುಕ್ತಿಕ್ಷೇತ್ರ ಟ್ರಸ್ಟ್ ಭಕ್ತರ ಅನುಕೂಲಕ್ಕಾಗಿ ಐಕ್ಯಮಂಟಪದ ಬಳಿ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಪುಣ್ಯಸ್ನಾನ, ದೇವರ ದರ್ಶನದ ಜತೆಗೆ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಖುಷಿಯಿಂದ ತಮ್ಮಿಷ್ಟದ ವಸ್ತು ಖರೀದಿಸಿ ಸಂತಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts