ಮಲಪ್ರಭಾ ಜಾಧವ್ ದತ್ತು ಪಡೆದ ಕೆಎಲ್​ಇ

ಬೆಳಗಾವಿ: ಏಷ್ಯನ್ ಗೇಮ್ಸ್​ನ ಕುರಾಶ್ ಸ್ಪಧೆಯಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ್ ಅವರನ್ನು ಕೆಎಲ್​ಇ ಸಂಸ್ಥೆ ದತ್ತು ತೆಗೆದುಕೊಂಡಿದೆ ಎಂದು ರಾಜ್ಯಸಭೆ ಸದಸ್ಯ ಹಾಗೂ ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

ಮಲಪ್ರಭಾಳೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗೀತಾ ಕೆ. ದಾನಪ್ಪಗೋಳ, ಕುಶಾಲ ಲೋಹಾರ, ಮಂಡ್ಯದ ವಸುಂಧರಾ ಎಂ.ಎಂ. ಹಾಗೂ ಶಿಕಾರಿಪುರದ ಅವಿನಾಶ್ ವಿ ಅವರನ್ನು ಕೆಎಲ್​ಇ ಸಂಸ್ಥೆ ದತ್ತು ಪಡೆದು ಅವರಿಗೆ ತರಬೇತಿ ನೀಡಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಣಿಗೊಳಿಸಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕ್ರೀಡಾಪಟುಗಳಿಗೆ ವಿದ್ಯಾಭ್ಯಾಸ, ಊಟ, ವಸತಿ ಸೇರಿ ಎಲ್ಲ ಮೂಲ ಸೌಕರ್ಯಗಳನ್ನು ಕೆಎಲ್​ಇ ಸಂಸ್ಥೆ ಒದಗಿಸಲಿದೆ. ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು, ಚಿನ್ನದ ಪದಕ ಗೆಲ್ಲಲು ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಡಾ. ಕೋರೆ ತಿಳಿಸಿದರು.

ಮಲಪ್ರಭಾಗೆ ಅಂತಾರಾಷ್ಟ್ರೀಯ ಮಟ್ಟದ ಕೋಚ್​ಗಳಿಂದ ತರಬೇತಿ ಕೊಡಿಸಲು ನಿರ್ಧರಿಸಲಾಗಿದೆ. ಬೆಳಗಾವಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಒಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ಗೆದ್ದು ಬರುವಂತೆ ಕ್ರೀಡಾಪಟುಗಳನ್ನು ಬೆಳಗಾವಿಯಲ್ಲಿ ಅಣಿಗೊಳಿಸಲಾಗುವುದು ಎಂದು ಡಾ. ಪ್ರಭಾಕರ ಕೋರೆ ಹೇಳಿದರು.

ಮಲಪ್ರಭಾ ಜಾಧವ್ ಅವರನ್ನು ಸನ್ಮಾನಿಸಲಾಯಿತು. ತ್ರಿವೇಣಿ ಸಿಂಗ್, ಜಿತೇಂದ್ರ ಸಿಂಗ್, ಕೆಎಲ್​ಇ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಸಂಶೋಧನೆ ಕೇಂದ್ರದ ಕುಲಪತಿ ಡಾ. ವಿವೇಕ ಸಾವೋಜಿ, ಕುಲಸಚಿವ ಡಾ.ವಿ.ಡಿ. ಪಾಟೀಲ ಹಾಗೂ ಕೆಎಲ್​ಇ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ದೇಸಾಯಿ ಇದ್ದರು.