ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿತೀರದಲ್ಲಿ ಮಕರ ಸಂಕ್ರಮಣ ದಿನದ ನಿಮಿತ್ತ ಮಂಗಳವಾರ ಸಾಗರೋಪಾದಿಯಲ್ಲಿ ಭಕ್ತರು ಎಳ್ಳು-ಅರಿಶಿನ ಹಚ್ಚಿಕೊಂಡು ಪವಿತ್ರ ಸ್ನಾನ ಮಾಡಿದರು.
ಸ್ನಾನದ ನಂತರ ಭಕ್ತರು ಮಲಪ್ರಭಾ ನದಿ ಮಧ್ಯದ ಶರಣೆ ಗಂಗಾಂಬಿಕಾ ಐಕ್ಯಮಂಟಪ, ವಿಠ್ಠಲ-ರುಕ್ಮೀಣಿ ಮಂದಿರ ಹಾಗೂ ಅಶ್ವತ್ಥ-ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು. ಗಂಗಾಮಾತೆಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು.
ಕುಟುಂಬ ಸಮೇತರಾಗಿ ಕುಳಿತುಕೊಂಡು ಮನೆಯಿಂದ ತಂದಿದ್ದ ಮಾದಲಿ, ಕರ್ಚಿಕಾಯಿ, ಸಜ್ಜಿರೊಟ್ಟಿ, ಮೊಸರನ್ನ ಸೇರಿ ತರಹೇವಾರಿ ಆಹಾರ ಖಾದ್ಯ ಸವಿದರು. ಜಾತ್ರೆಯಲ್ಲಿ ಸುತ್ತಾಡಿ ಇಷ್ಟದ ವಸ್ತುಗಳನ್ನು ಖರೀದಿಸಿದರು. ಜೋಕಾಲಿ ಆಡಿ ಸಂಭ್ರಮಿಸಿದರು. ಮಕರ ಸಂಕ್ರಮಣದ ಪ್ರಯುಕ್ತ ಶ್ರೀಕ್ಷೇತ್ರ ಜನಸಾಗರದಿಂದ ತುಂಬಿತ್ತು. ಪೊಲೀಸರು ಸಂಚಾರ ಹಾಗೂ ದಟ್ಟಣೆ ನಿಯಂತ್ರಿಸಿ, ಶಾಂತಿಸುವ್ಯವಸ್ಥೆ ಕಾಪಾಡಲು ಶ್ರಮಿಸಿದರು.