ಸಾಹಿತ್ಯದ ಪೂರ್ಣ ದೃಷ್ಟಿ ತೆರೆದಿಡುವ ಶ್ರೀ ರಾಮಾಯಣ ದರ್ಶನಂ

ಶೃಂಗೇರಿ: ದೇವಾಲಯಕ್ಕೆ ಹೋದಾಗ ಭಗವಂತನನ್ನು ದರ್ಶಿಸಿದಾಗ ನಮ್ಮ ಅಂತರಂಗದಲ್ಲಿ ಆಗುವ ಪರಿವರ್ತನೆಯಂತೆ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಸಾಹಿತ್ಯದ ಪೂರ್ಣದೃಷ್ಟಿ ತೆರೆದಿಡುತ್ತದೆ ಎಂದು ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಂ.ಜಯಶೀಲ ತಿಳಿಸಿದರು.

ಕನ್ನಡ ಭವನದಲ್ಲಿ ತಾಲೂಕು ಕಸಾಪ ನೂತನ ಪದಾಧಿಕಾರಿಗಳ ಸೇವಾದೀಕ್ಷೆ, ದತ್ತಿ ಉಪನ್ಯಾಸದ ಸರಣಿ ಕಾರ್ಯಕ್ರಮಗಳಲ್ಲಿ ‘ಡಾ. ಹುಲ್ಸೆ ಮಂಜಪ್ಪಗೌಡರು ಸ್ಥಾಪಿಸಿದ ದತ್ತಿ’ ಕುವೆಂಪು ಸಾಹಿತ್ಯದಲ್ಲಿ ರಾಮಾಯಣ ದರ್ಶನಂ, ಮಲೆನಾಡು ವೈಚಾರಿಕೆ ಹಾಗೂ ಅಧ್ಯಾತ್ಮ’ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ವಾಲ್ಮೀಕಿ ರಾಮಾಯಣದ ಮೂಲಕತೆಗೆ ಕುಂದಾಗದ ರೀತಿಯಲ್ಲಿ 20ನೇ ಶತಮಾನದ ಮನೋಧರ್ಮವನ್ನು ಕುವೆಂಪು ಶ್ರೀ ರಾಮಾಯಣ ದರ್ಶನಂನಲ್ಲಿ ಎತ್ತಿಹಿಡಿದಿದ್ದಾರೆ. ಸ್ಮಶಾನ ಕುರುಕ್ಷೇತ್ರದಲ್ಲಿ ಎರಡನೇ ಮಹಾಯುದ್ಧದ ವಿವರಣೆ ಕಾಣಬಹುದು. ಪ್ರತಿ ಪಾತ್ರವನ್ನೂ ಪೂರ್ಣದೃಷ್ಟಿಯಿಂದ ಕಂಡ ಕುವೆಂಪು ಮಂಥರೆ, ರಾಮ, ಸೀತೆ, ಶಬರಿ, ರಾವಣ, ಕೌಸಲ್ಯಾ, ರಾವಣ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಇಲ್ಲಿನ ಪಾತ್ರಗಳು ಪ್ರಜಾಪ್ರಭುತ್ವದ ಇಂದಿನ ವ್ಯವಸ್ಥೆ ಚಿತ್ರಿಸುವಂತಿವೆ ಎಂದರು.

ಮಂಥರೆ ಪಾತ್ರದ ಮೂಲಕ ತುಳಿತಕ್ಕೆ ಒಳಗಾದ ದಲಿತ ಸಮುದಾಯದ ನೋವನ್ನು ಎತ್ತಿಹಿಡಿದ ಕಾರ್ಲ್​ವಾರ್ಕ್ಸ್ ಸಿದ್ಧಾಂತ ಅಳವಡಿಸಲಾಗಿದೆ. ರಾಮಾಯಣ ದರ್ಶನಂ ಮೂಲಕ ಮಾನವೀಯತೆ, ಪ್ರೀತಿ, ಮಮತೆ ಜಗತ್ತಿನ ಮೌಲ್ಯ ಎಂಬುದನ್ನು ಎತ್ತಿ ಹಿಡಿದಿದ್ದಾರೆ. ಶಬರಿ ಪಾತ್ರದ ಮೂಲಕ ಮಲೆನಾಡಿನ ಮುದುಕಿ ಚಿತ್ರಣ, ಇಲ್ಲಿನ ಪರಿಸರದಲ್ಲಿ ಸಿಗುವ ಕೆನೆಮೊಸರು, ಜೇನುತುಪ್ಪ ಬಿದಿರುತಳಿ, ಬಳ್ಳಿಗಳು, ಹಣ್ಣುಗಳು ಮುಂತಾದವುಗಳನ್ನು ಪ್ರಸ್ತುತ ಪಡಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಆಶೋಕ್ ಮಾತನಾಡಿ, ಸಾಹಿತ್ಯದ ಚಟುವಟಿಕೆ ನಿರಂತರವಾಗಿರಬೇಕು. ಕಲೆ, ಸಾಹಿತ್ಯದ ಕ್ರಿಯಾತ್ಮಕ ಚಟುವಟಿಕೆಗೆ, ಕನ್ನಡ ನಾಡುನುಡಿ ಸೇವೆಗೆ ಬದ್ಧರಾಗಿರಬೇಕು. ಸಾಹಿತ್ಯ ಸಮಾಜದ ಜೀವದ್ರವ್ಯ. ಅದು ಎಲ್ಲವನ್ನೂ ಮೀರಿಸುವ ಪ್ರಬುದ್ಧತೆ. ಭಾರತದಲ್ಲಿ ಶಕ್ತಿ-ಯುಕ್ತಿಗಳು ಬೇರ್ಪಟ್ಟಿದ್ದು, ಅವೆರೆಡೂ ಒಂದಾದರೆ ಮಾತ್ರ ದೇಶದ ಉನ್ನತಿ ಸಾಧ್ಯ ಎಂದರು.

ಉಪನ್ಯಾಸಕಿ ಅನಿತಾ ಹೆಗ್ಗೋಡು ಬರೆದ ‘ಕೆಂಡಕೊಂಡಕ್ಕೆ ನಾನು ಋಣವಾದೆ’ ಪುಸ್ತಕವನ್ನು ತಾಲೂಕು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ದಿನೇಶ್ ಬಿಡುಗಡೆ ಮಾಡಿದರು.

ಅನನ್ಯ ಸಾಹಿತ್ಯದ ಚಿಲುಮೆ: ವಾಲಿ-ಸುಗ್ರೀವರ ಮೂಲಕ ಮಲೆನಾಡಿನ ಅಣ್ಣ-ತಮ್ಮಂದಿರ ನಡುವಿನ ಸಂಬಂಧಗಳಲ್ಲಿ ಅಂತರವಿರಬಾರದು. ಮಾತುಕತೆ ಮೂಲಕ ಬಾಂಧವ್ಯ ಗಟ್ಟಿಗೊಳಿಸಬೇಕು ಎಂಬ ಸಂದೇಶ ನೀಡಲು ಕುವೆಂಪು ಯಶಸ್ವಿಯಾಗಿದ್ದಾರೆ. ಸಣ್ಣ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಿದ ಅವರ ರಾಮಾಯಣ ದರ್ಶನಂ ನಿರಂತರ ನಮ್ಮ ನಡುವೆ ಇರುವ ಅನನ್ಯ ಸಾಹಿತ್ಯದ ಚಿಲುಮೆಯಾಗಿದೆ ಎಂದು ಡಾ. ಬಿ.ಎಂ.ಜಯಶೀಲ ತಿಳಿಸಿದರು. ರಾವಣ ಸೀತೆಯನ್ನು ಗೌರವದಿಂದ ಕಾಣುವ ಮೂಲಕ ಸ್ತ್ರೀಯನ್ನು ಗೌರವಿಸಬೇಕು ಎಂಬ ಸಂದೇಶವನ್ನು ಮಹಾಕಾವ್ಯದಲ್ಲಿ ಕಾಣಬಹುದು ಎಂದರು.

Leave a Reply

Your email address will not be published. Required fields are marked *