Friday, 16th November 2018  

Vijayavani

Breaking News

ಧರ್ಮಾಕ್ರೋಶ ಸ್ಫೋಟ

Wednesday, 21.03.2018, 3:07 AM       No Comments

ದಾವಣಗೆರೆ: ಲಿಂಗಾಯತ ವೀರಶೈವರನ್ನು ಇಬ್ಭಾಗ ಮಾಡಿ ಹಿಂದು ಧರ್ಮದಿಂದ ಪ್ರತ್ಯೇಕಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವೀರಶೈವ ಲಿಂಗಾಯತ ಮಹಾಸಭಾ ಸಿಡಿದೆದ್ದಿದೆ. ‘ಬಸವತತ್ವ ಒಪ್ಪಿತ ವೀರಶೈವ’ ಎಂಬ ಪದ ಬಳಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಪ್ರತ್ಯೇಕ ಧರ್ಮ ಕುರಿತ ಸರ್ಕಾರದ ತೀರ್ಮಾನ ಅನ್ಯಾಯದ ಪರಮಾವಧಿ ಎಂದಿದ್ದಾರೆ. ಮತ್ತೊಂದೆಡೆ ಲಿಂಗಾಯತ ಧರ್ಮ ಸ್ಥಾಪನೆ ಕುರಿತಂತೆ ಗೊಂದಲ ಸೃಷ್ಟಿಯಾಗಿದ್ದು, ಈ ಸಂಬಂಧ ಸ್ಪಷ್ಟನೆ ಬೇಕೆಂದು ಸಚಿವ ಬಸವರಾಜ ರಾಯರಡ್ಡಿ ಪ್ರತಿಪಾದಿಸಿರುವುದು ಸರ್ಕಾರಕ್ಕೆ ಹೊಸ ತಲೆನೋವು ತಂದಿದೆ.

ಪ್ರತ್ಯೇಕ ಧರ್ಮ ವಿರೋಧಿಸುತ್ತಿರುವ ಗುರು-ವಿರಕ್ತ ಮಠಾಧೀಶರು ಹಾಗೂ ಶಾಮನೂರು ಶಿವಶಂಕರಪ್ಪ ಮಂಗಳವಾರ ಗುಪ್ತ ಸಭೆ ನಡೆಸಿದ ಬಳಿಕ ತಳೆದ ನಿಲುವಿನಿಂದಾಗಿ ವಿವಾದ ಮತ್ತಷ್ಟು ಕಾವೇರಿದೆ. ಪ್ರತ್ಯೇಕ ಧರ್ಮ ವಿಷಯಕ್ಕೆ ರ್ತಾಕ ಅಂತ್ಯ ಕಾಣಿಸಲಾಗಿದೆ ಎಂದು ಸರ್ಕಾರ ಭಾವಿಸಿದ್ದರೂ ಮಂಗಳವಾರದ ಬೆಳವಣಿಗೆಯಿಂದಾಗಿ ವಿವಾದದಲ್ಲಿ ಮತ್ತೆ ಹೊಗೆಯಾಡಲಾರಂಭಿಸಿದೆ. ಮಾರ್ಚ್ 23 ರಂದು ಬೆಂಗಳೂರಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ಕರೆದು, ಮುಂದೆ ಕೈಗೊಳ್ಳಬೇಕಾದ ತೀರ್ವನಗಳ ಕುರಿತು ಚಿಂತನೆ ನಡೆಸುವುದಾಗಿ ಶಾಮನೂರು ಪ್ರಕಟಿಸಿದರು. ಸಂಪುಟ ಸಭೆ ನಿರ್ಣಯವನ್ನು ಸೋಮವಾರ ಸ್ವಾಗತಿಸಿದ್ದ ಶಾಮನೂರು, ಮರುದಿನ ತಮ್ಮ ನಿಲುವು ಪರಿಷ್ಕರಿಸಿ ಪ್ರತ್ಯೇಕ ಧರ್ಮ ಕುರಿತ ಸರ್ಕಾರದ ತೀರ್ಮಾನ ಅನ್ಯಾಯದ ಪರಮಾವಧಿ ಎಂದು ಕಿಡಿ ಕಾರಿದರು. ವೀರಶೈವ ಧರ್ಮ 12 ನೇ ಶತಮಾನಕ್ಕೆ ಮುಂಚೆ ಇರಲೇ ಇಲ್ಲ ಎಂಬಂತೆ ಹೇಳಿರುವುದು ಒಪ್ಪತಕ್ಕ ವಿಷಯವಲ್ಲ. ಬಸವಪೂರ್ವದಲ್ಲೇ ವೀರಶೈವ ಧರ್ಮವಿತ್ತು ಎಂದರು.

ರೇಣುಕಾಚಾರ್ಯರಿಂದ ಸ್ಥಾಪಿತವಾದ ಧರ್ಮವಿದು. ವೀರಶೈವ ಲಿಂಗಾಯತ ಧರ್ಮಕ್ಕೆ ರೇಣುಕರು ಹಾಗೂ ಬಸವಣ್ಣ ಎರಡು ಕಣ್ಣುಗಳಿದ್ದಂತೆ. ಇಬ್ಬರೂ ಒಂದೇ ಎಂಬ ಮೊದಲಿನ ತೀರ್ವನಕ್ಕೆ ವೀರಶೈವ ಮಹಾಸಭೆ ಈಗಲೂ ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.

ಜಾತಿಗೊಬ್ಬ ಸ್ವಾಮೀಜಿ ಮಾಡಲು ಬಸವಣ್ಣ ಹೇಳಿದ್ದನೇ ಎಂದು ಪ್ರಶ್ನಿಸಿದ ಶಾಮನೂರು, ಜಾತಿಗೊಬ್ಬ ಸ್ವಾಮೀಜಿ ಮಾಡುವ ಮೂಲಕ ಕೆಲವರು ಸಮಾಜ ಒಡೆಯುತ್ತಿದ್ದಾರೆ ಎಂದು ಬೇಸರಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರು, ವಾಮದೇವ ಶ್ರೀ, ಕೊಟ್ಟೂರು ಜಾನಕೋಟಿ ಶ್ರೀ, ಆವರಗೊಳ್ಳ ಶ್ರೀ ವೀರಶೈವ ಮಹಾಸಭೆ ಉಪಾಧ್ಯಕ್ಷ ಅಥಣಿ ಎಸ್.ವೀರಣ್ಣ, ದೇವರಮನಿ ಶಿವಕುಮಾರ್, ಇತರರಿದ್ದರು.

ಮಹಾಸಭೆಗೆ ಅಭಿನಂದನೆ: ಪ್ರತ್ಯೇಕ ಧರ್ಮ ಕುರಿತ ನಿರ್ಣಯ ವಿರೋಧಿಸಿ ಮೊದಲಿನ ತೀರ್ವನಕ್ಕೆ ಬದ್ಧರಾದ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಂಪುಟ ಸಭೆಯಲ್ಲಿ ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಪ್ರತಿಪಾದಿಸಿದ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ ಖಂಡ್ರೆ ಅವರಿಗೆ ಗುರು ವಿರಕ್ತ ಮಠಾಧೀಶರು ಹಾಗೂ ವೀರಶೈವ ಮಠಾಧೀಶರ ರಾಷ್ಟ್ರೀಯ ಪರಿಷತ್ ವತಿಯಿಂದ ಅಭಿನಂದನೆ ಹೇಳಲಾಯಿತು.

ಸೋಮವಾರ ಪೂರ್ಣ ವಿವರ ಸಿಕ್ಕಿರಲಿಲ್ಲ. ಪರಾಮಶಿಸಿ ನೋಡಿದಾಗ ಬಸವತತ್ವ ಒಪ್ಪಿತ ವೀರಶೈವ ಎಂಬ ಪದ ಸೇರಿಸಿದ್ದು ತಿಳಿಯಿತು.ಈ ಪದ ಬೇಕಿರಲಿಲ್ಲ. ಇದೊಂದು ಶಬ್ದ ಬಿಟ್ಟಿದ್ದರೆ ತಕರಾರು ಇರಲಿಲ್ಲ. ಹೀಗೆ ಮಾಡದೆ ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ.

| ಶಾಮನೂರು ಶಿವಶಂಕರಪ್ಪ ವೀರಶೈವ ಮಹಾಸಭಾ ಅಧ್ಯಕ್ಷ

ಮುಸ್ಲಿಮರ ಆತಂಕ

ಲಿಂಗಾಯತ, ಬಸವ ತತ್ವ ಪಾಲಿಸುವ ವೀರಶೈವ ಲಿಂಗಾಯತರನ್ನು ಧಾರ್ವಿುಕ ಅಲ್ಪಸಂಖ್ಯಾತರನ್ನಾಗಿ ಗುರುತಿಸಿ ಶೈಕ್ಷಣಿಕ ಮೀಸಲಾತಿ ನೀಡುವುದಾಗಿ ಸರ್ಕಾರ ಹೇಳಿದೆ. ಸದ್ಯ ಪ್ರವರ್ಗ 2 ಬಿ ಅಡಿಯಲ್ಲಿ ಮುಸ್ಲಿಮರು ಶೇ. 4 ಶೈಕ್ಷಣಿಕ ಮೀಸಲಾತಿ ಪಡೆಯುತ್ತಿದ್ದಾರೆ. ಧಾರ್ವಿುಕ ಅಲ್ಪಸಂಖ್ಯಾತ ಲಿಂಗಾಯತರು ಸಹ ಇದೇ ಶೇ. 4 ಮೀಸಲಾತಿಯಲ್ಲಿ ಪಾಲು ಪಡೆಯುತ್ತಾರೆ. ಇದರಿಂದ ತಮಗೆ ಭಾರಿ ಅನ್ಯಾಯವಾಗುತ್ತದೆ ಎಂದು ಮುಸ್ಲಿಮರು ಆತಂಕಗೊಂಡಿದ್ದಾರೆ. ಕಾಂಗ್ರೆಸ್​ಅನ್ನು ವ್ಯಾಪಕವಾಗಿ ಬೆಂಬಲಿಸುತ್ತಿರುವ ಮುಸ್ಲಿಮರನ್ನು ತನ್ನತ್ತ ಎಳೆದುಕೊಳ್ಳಲು ಜೆಡಿಎಸ್ ಸಜ್ಜಾಗಿದೆ. ಪರೋಕ್ಷವಾಗಿ ಇದು ಬಿಜೆಪಿಗೆ ಲಾಭ ತಂದರೂ ಅಚ್ಚರಿಯಿಲ್ಲ.


ಕೈ ಅಭ್ಯರ್ಥಿಗಳಿಗೆ ನಡುಕ

ಹುಬ್ಬಳ್ಳಿ: ಲಿಂಗಾಯತವನ್ನು ಪ್ರತ್ಯೇಕ ಧರ್ಮವಾಗಿಸುವ ಸರ್ಕಾರದ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಸಮುದಾಯಗಳ ಮುಖಂಡರು ಕಾಂಗ್ರೆಸ್ ವಿರುದ್ಧವೇ ತಿರುಗಿಬೀಳುವ ತಂತ್ರ ಹೆಣೆದಿದ್ದಾರೆ. ಇದಕ್ಕೆ ಪೂರಕವಾಗಿ ಪಂಚ ಪೀಠಾಧೀಶ್ವರರು ಹಾಗೂ ವಿರಕ್ತ ಮಠಾಧೀಶರು ಕಾಂಗ್ರೆಸ್ ವಿರುದ್ಧ ಧರ್ಮಯುದ್ಧ ಘೊಷಿಸುವುದಾಗಿ ಸಾರುವ ಜತೆಯಲ್ಲೇ ಉತ್ತರ ಕರ್ನಾಟಕ ಭಾಗದಲ್ಲಿಯೇ ಠಿಕಾಣಿ ಹೂಡಿ ಸಂಚಾರ ಆರಂಭಿಸಿದ್ದಾರೆ. ಇದು ಕೇವಲ ಕಾಂಗ್ರೆಸ್​ನ ಲಿಂಗಾಯತ ಹಾಗೂ ವೀರಶೈವ ಅಭ್ಯರ್ಥಿಗಳಿಗೆ ಮಾತ್ರವಲ್ಲ; ಇತರ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿಗಳಿಗೂ ನಡುಕ ಹುಟ್ಟಿಸಿದೆ. ಉತ್ತರ ಕರ್ನಾಟಕದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ವೀರಶೈವರು, ಲಿಂಗಾಯತರು ಹಾಗೂ ಅದೇ ಸಮುದಾಯದ ಉಪ ಪಂಗಡದವರೇ ನಿರ್ಣಾಯಕ.

ಬಹುತೇಕರು ಮಠಾಧೀಶರ ಮಾತನ್ನು ಶಿರಸಾ ವಹಿಸಿ ಪಾಲಿಸುವವರು. ಹೀಗಾಗಿ, ಸರ್ಕಾರದ ನಿರ್ಧಾರ ಕಾಂಗ್ರೆಸ್​ಗೇ ತಿರುಗುಬಾಣವಾಗುವಂತೆ ಮಾಡುವ ಪ್ರಯತ್ನ ಆರಂಭವಾಗಿದೆ. ಪ್ರತಿ ಬಡಾವಣೆ, ಗ್ರಾಮದಲ್ಲೂ ಕಟ್ಟಾ ವೀರಶೈವ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಮಂಗಳವಾರವೇ ಅನೇಕ ಕಡೆ ಗುಪ್ತ ಸಭೆ ನಡೆಸಿ, ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರಿಗಾದರೂ ಮತ ಚಲಾಯಿಸಿ; ಕಾಂಗ್ರೆಸ್ಸನ್ನು ಹೀನಾಯವಾಗಿ ಸೋಲಿಸಿ ಎಂಬ ಸಂದೇಶ ನೀಡಲಾಗಿದೆ. ಈ ಆಕ್ರೋಶ ಗುಪ್ತಗಾಮಿನಿಯಂತೆ ವ್ಯಾಪಕವಾಗುತ್ತ ಹೋದರೆ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ತೊಂದರೆ ಖಚಿತ.

ಸಚಿವರಾದ ವಿನಯ ಕುಲಕರ್ಣಿ, ಎಂ.ಬಿ. ಪಾಟೀಲ ಸೇರಿದಂತೆ ಕಾಂಗ್ರೆಸ್ ಮುಖಂಡರೇ ಧರ್ಮ ಒಡೆಯಲು ಕಾರಣರಾಗಿದ್ದಾರೆ ಎಂಬ ಆಕ್ರೋಶ ಭುಗಿಲೇಳುತ್ತಿದೆ. ಈ ನಾಯಕರ ಕ್ಷೇತ್ರದಲ್ಲೂ ವೀರಶೈವ-ಲಿಂಗಾಯತರೇ ನಿರ್ಣಾಯಕ ಮತದಾರರು. ಅವರನ್ನು ಸೋಲಿಸಲು ಪಡೆ ಸನ್ನದ್ಧವಾಗುತ್ತಿದೆ. ಅಷ್ಟೇ ಅಲ್ಲ; ಅಕ್ಕಪಕ್ಕದ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಲಿಂಗಾಯತರಾಗಿದ್ದರೂ, ಅಲ್ಲದಿದ್ದರೂ ಧರ್ಮ ವಿಭಜನೆ ವಿರುದ್ಧದ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಧರ್ಮ ಪ್ರತ್ಯೇಕತೆಗೆ ವಿರುದ್ಧವಾಗಿರುವ ವೀರಶೈವ-ಲಿಂಗಾಯತ ಮಠಾಧೀಶರು ಹಾಗೂ ಮುಖಂಡರಿಗೆ ಇತರ ಧರ್ಮದ ಮುಖಂಡರು ಸಹ ಬೆಂಬಲ ನೀಡುವುದರಿಂದ ಕಾಂಗ್ರೆಸ್ ವಿರೋಧಿ ಅಲೆ ವ್ಯಾಪಿಸುತ್ತಲೇ ಹೋಗಬಹುದು.


Leave a Reply

Your email address will not be published. Required fields are marked *

Back To Top