ಶಿರಹಟ್ಟಿ: ದಿನವಿಡೀ ಬಿಸಿಲು, ಮಳೆ, ಗಾಳಿಯಿಂದ ಸಂಕಷ್ಟ ಅನುಭವಿಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣೆಗಾಗಿ ಪಿಎಂ ಸ್ವ-ನಿಧಿ ಯೋಜನೆಯಡಿ ವಿತರಿಸಿದ ಕೊಡೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಬೀದಿ ಬದಿ ವ್ಯಾಪಾರಸ್ಥರಿಗೆ ನೆರಳು ಒದಗಿಸುವ ಸಲುವಾಗಿ ಕೊಡೆಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿರಹಟ್ಟಿ ಪಪಂ ವ್ಯಾಪ್ತಿಯಲ್ಲಿ ಒಟ್ಟು 356 ಬೀದಿಬದಿ ವ್ಯಾಪಾರಸ್ಥರಿದ್ದು, ಇವರು ಮೊದಲನೇ ಹಂತದಲ್ಲಿ ಪ್ರತಿಯೊಬ್ಬರೂ 10,000 ಮೊತ್ತದ ಕಿರುಸಾಲ ಪಡೆದುಕೊಂಡಿದ್ದಾರೆ. ಈ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕ್ಗಳ ವಿಶ್ವಾಸಾರ್ಹತೆ ಗಳಿಸಬೇಕು ಎಂದರು.
ವ್ಯಾಪಾರಸ್ಥರಿಂದ ಸಂಗ್ರಹವಾಗುವ ಹಣವನ್ನು ಪ್ರತ್ಯೇಕ ಖಾತೆಯಲ್ಲಿ ಜಮೆ ಮಾಡಿ, ಅದನ್ನು ಯಾವುದೇ ದುರುಪಯೋಗವಿಲ್ಲದೆ ಅವರ ಶ್ರೇಯೋಭಿವೃದ್ಧಿಗೆ ಬಳಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸದಸ್ಯ ಸಂದೀಪ ಕಪತ್ತನವರ, ಫಕೀರೇಶ ರಟ್ಟಿಹಳ್ಳಿ, ಪರಮೇಶ ಪರಬ, ಮಂಜುನಾಥ ಘಂಟಿ, ಆಶ್ರತ್ ಡಾಲಾಯತ್, ಇಸಾಕ್ ಆದ್ರಳ್ಳಿ, ನಾಮ ನಿರ್ದೇಶಿತ ಸದಸ್ಯ ಅಲ್ಲಾಬಕ್ಷ ನಗಾರಿ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಬ್ಬಿರ್ ನಗಾರಿ, ಆನಂದ ಕೋಳಿ, ಮುತ್ತು ಹೂಗಾರ, ಅಬೇದಾ ಯಾದಗಿರಿ, ರಫೀಕ್ ಛಬ್ಬಿ, ಶಂಕ್ರವ್ವ ಕಂಬಳಿ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಇದ್ದರು.