ಶಿವಮೊಗ್ಗ : ನಿರಂತರ ಶ್ರದ್ಧೆಯುಳ್ಳ ಕಲಿಕೆಯೊಂದಿಗೆ ನಿಮ್ಮನ್ನು ಸೋಲಿಸುವ ವಿಚಾರಗಳಿಂದಲೇ ಗೆಲುವು ಪಡೆಯಲು ಪ್ರಯತ್ನಿಸಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎಲ್.ಮುಕುಂದರಾಜ್ ಹೇಳಿದರು.
ಶಂಕರಘಟ್ಟದ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಓದು, ಅರಿವು, ಬರಹ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮೊಳಗಿನ ಅರಿವು ವಿಸ್ತಾರವಾಗುತ್ತಿದ್ದಂತೆ ಅಕ್ಷರ ಪ್ರಜ್ಞೆ ಆಳವಾಗಿ ಗಟ್ಟಿಯಾಗಿ ನಿಲ್ಲುವಂತಾಗಬೇಕು ಎಂದರು.
ಹಿಂದಿನವರಿಗೆ ಸಿಗದ ಅವಕಾಶಗಳು ಈಗಿನವರಿಗೆ ಸಿಗುತ್ತಿದೆ. ಅವಕಾಶಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಇಂದಿನ ವ್ಯವಸ್ಥೆ ಸ್ವಾತಂತ್ರೃ ಹೋರಾಟಗಾರರ ಶ್ರಮದಿಂದ ದೊರೆತಿರುವುದು. ಅದರಿಂದಲೇ ಪ್ರಜಾಪ್ರಭುತ್ವ, ಸಂವಿಧಾನ ಸಿಕ್ಕಿತು. ಸಾಮರ್ಥ್ಯಕ್ಕೆ ತಕ್ಕನಾಗಿ ಅಕ್ಷರದ ಮೂಲಕ ಫಲವನ್ನು ಪಡೆಯಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, 10-15 ವರ್ಷ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದರೂ ಸಮರ್ಪಕವಾಗಿ ಓದಲು, ಬರೆಯಲು, ಮಾತನಾಡುವ ಸಾಮರ್ಥ್ಯ ಪಡೆದುಕೊಂಡಿಲ್ಲ ಎಂದರೆ ಅದು ಯೋಚಿಸಬೇಕಾದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ ಧನ್ವಂತರಿ ಗೋಡೆ ಬರಹ ಪತ್ರಿಕೆ ಲೋಕಾರ್ಪಣೆ ಮಾಡಿದರು. ಪ್ರಾಚಾರ್ಯ ಡಾ. ಎಚ್.ಎಂ.ಧರ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ದಾಳೇಗೌಡ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಇದ್ದರು.
ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಜಯಶಂಕರ್ ಹಲಗೂರು ಕನ್ನಡ ಪಠ್ಯದ ಬಹುಮುಖಿ ಮಹತ್ವ ಕುರಿತು ಮಾತನಾಡಿದರು. ಸಾಹಿತಿ ಡಾ.ಕೇಶವಶರ್ಮ ಕವನ ಓದು, ಅರಿವು, ಬರಹದ ಅಭಿವ್ಯಕ್ತಿಯ ಕುರಿತು ಮಾರ್ಗದರ್ಶನ ಮಾಡಿದರು. ಉಪನ್ಯಾಸಕ ಡಾ.ಜಿ.ಆರ್. ಲವ ಕಥೆ, ಓದು ಅರಿವು, ಬರಹದ ಸಾಧ್ಯತೆ ಕುರಿತು ಮಾಹಿತಿ ನೀಡಿದರು.