ಸೋಮವಾರಪೇಟೆ: ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿದರೆ ದುಶ್ಚಟಗಳಿಂದ ಮಕ್ಕಳನ್ನು ಪಾರು ಮಾಡಬಹುದು ಎಂದು ಪಟ್ಟಣದ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಕೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ಥಳೀಯ ಎಸ್‌ಜೆಎಂ ಬಾಲಿಕ ಪ್ರೌಢಶಾಲೆಗೆ ಗುರುವಾರ ಉಚಿತವಾಗಿ ಬೆಂಚ್ ಮತ್ತು ಡೆಸ್ಕ್‌ಗಳನ್ನು ವಿತರಿಸಿ ಮಾತನಾಡಿದರು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಅಭಿಲಾಷೆ, ಆಸಕ್ತಿ, ನಡಾವಳಿಗೆ ಬಗ್ಗೆ ಹದ್ದಿನ ಕಣ್ಣಿಡಬೇಕು. ತಪ್ಪು ಮಾಡಿದಾಗ, ಅವರ ತಪ್ಪಿನ ಅರಿವು ಮಾಡಿಕೊಟ್ಟರೆ ಎಲ್ಲವನ್ನು ಮಕ್ಕಳು ಸ್ವೀಕರಿಸುತ್ತಾರೆ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಬೇಕು. ಒಮ್ಮೆ ಚಟಕ್ಕೆ ಬಿದ್ದರೆ ಭವಿಷ್ಯ ಹಾಳಾಗಲಿದೆ ಎಂದು ಎಚ್ಚರಿಕೆ ನೀಡಿದರು. ಕೊಡಗು ಜಿಲ್ಲಾ ಜಾಗೃತಿ ಸಮಿತಿಯ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನು ಮಟ್ಟ ಹಾಕಲು ವಿದ್ಯಾರ್ಥಿಗಳು ಸಹಕಾರ ನೀಡಬೇಕು. ಅಂತಹುದು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವಜನತೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಒಳ್ಳೆಯದು ಮಾಡುವವರನ್ನು ಸಮಾಜ ಸದಾ ಗುರುತಿಸಿ ಗೌರವಿಸುತ್ತದೆ ಎಂದು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ರೋಹಿತ್ ಮಾತನಾಡಿ, ಶೇ 80 ರಷ್ಟು ಗ್ರಾಮಭಿವೃದ್ಧಿ ಯೋಜನೆಯಿಂದ ಹಾಗೂ ಶೇ. 20ರಷ್ಟು ಹಣವನ್ನು ಆಡಳಿತ ಮಂಡಳಿ ಭರಿಸಿ, ಶಾಲೆಗೆ ಹತ್ತು ಬೆಂಚ್, ಹತ್ತು ಡೆಸ್ಕ್‌ಗಳನ್ನು ವಿತರಿಸಲಾಗಿದೆ ಎಂದರು.
ಯೋಜನೆ ಅಭಿವೃದ್ಧಿ ಅಧಿಕಾರಿ ಮೋಹಿನಿ, ಸ್ವಾಸ್ಥೃ ಸಂಕಲ್ಪ, ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟನೆಗಾರ ಎಚ್. ಬಿ. ಸುರೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಾರಪ್ಪ ಇದ್ದರು.