ಪ್ರೀತಿ, ಪ್ರೇಮಕ್ಕೆ ಬಲಿಯಾಗದೆ ಭವಿಷ್ಯ ರೂಪಿಸಿಕೊಳ್ಳಿ

ಚಾಮರಾಜನಗರ: ಹೆಣ್ಣು ಮಕ್ಕಳು ಪ್ರೀತಿ, ಪ್ರೇಮಕ್ಕೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಸಿ.ಸಂಧ್ಯಾರಾಣಿ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳು ಪ್ರೀತಿಮಾಡಿ ಓಡಿ ಹೋಗುವ ಮುನ್ನ ತಮ್ಮ ತಂದೆ, ತಾಯಿಗಳನ್ನೊಮ್ಮೆ ನೋಡಬೇಕು. ಪ್ರೀತಿ, ಪ್ರೇಮಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿರುವ ಅನೇಕ ಹೆಣ್ಣು ಮಕ್ಕಳು ಸಮಾಜದಲ್ಲಿದ್ದಾರೆ. ಪ್ರೀತಿ ಮಾಡುವುದನ್ನು ಬಿಟ್ಟು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಗಳಿಸಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳು ಹೆಚ್ಚಾಗಿ ಕಂಡುಬರುತ್ತವೆ. ದಿನನಿತ್ಯ 20-25 ಪ್ರಕರಣಗಳು ಈ ಎರಡು ಪದ್ಧತಿಗಳಿಗೆ ಸಂಬಂಧಿಸಿದ್ದಾಗಿವೆ. ವಿದ್ಯಾರ್ಥಿನಿಯರು ಮಾನಸಿಕ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನಪಾಠ ಕಲಿತು ಮುಂದೆ ಬರಬೇಕು ಎಂದರು.

ಮಕ್ಕಳ ಮೇಲಿನ ದೌರ್ಜನ್ಯಗಳು ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆಮಾಡಿ ತಿಳಿಸಬೇಕು. ಜತೆಗೆ ಮಹಿಳಾ ಸಹಾಯವಾಣಿ 1091ಕ್ಕೆ ಕರೆಮಾಡಿ ಹೆಣ್ಣು ಮಕ್ಕಳ ಸಮಸ್ಯೆಗಳ ಬಗ್ಗೆ ತಿಳಿಸುವ ಮೂಲಕ ಅವರ ರಕ್ಷಣೆಗೆ ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಮನೆಯವರಿಂದಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಪರ್ಯಾಸ ಎಂದರು.

ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಭಾವತಿ ಮಾತನಾಡಿ, ವಿದ್ಯಾವಂತರಿಂದಲೇ ಕೆಲವೊಮ್ಮೆ ಅಪರಾಧ ಪ್ರಕರಣಗಳು ನಡೆಯುತ್ತಿರುವುದು ದುರಂತ. ಪ್ರತಿಯೊಬ್ಬರು ಹೆಣ್ಣು ಮಕ್ಕಳನ್ನು ಗೌರವಿಸುವ ಮನೋಭಾವ ಹೊಂದಬೇಕು. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರದಂತಹ ಪ್ರಕರಣಗಳು ಕಡಿಮೆಯಾದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಹೆಣ್ಣು ಮಕ್ಕಳು ಇನ್ನೊಬ್ಬರನ್ನು ಅವಲಂಬಿಸಿ ಜೀವನ ಮಾಡದೆ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು. ಪ್ರೀತಿಯು ಪ್ರಾರಂಭದಲ್ಲಿ ಸಿಹಿಯಾಗಿ ಕಂಡರೂ ಆ ನಂತರ ಕಹಿಯಾಗಿ ಜೀವನ ಹಾಳು ಮಾಡಿಕೊಳ್ಳುವ ಸ್ಥಿತಿಗೆ ಹೋಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ಎಂ.ಆರ್.ಸುಮತಿ, ಕನ್ನಡ ಪ್ರಾಧ್ಯಾಪಕಿ ರುಕ್ಮಿಣಿ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.