ಅಲೋಕ್‌ ವರ್ಮಾ ವಜಾಕ್ಕೆ ಸಂಬಂಧಿಸಿದ ದಾಖಲೆಗಳ ಬಹಿರಂಗಕ್ಕೆ ಕಾಂಗ್ರೆಸ್‌ ನಾಯಕ ಖರ್ಗೆ ಒತ್ತಾಯ

ನವದೆಹಲಿ: ಸಿಬಿಐ ಮುಖ್ಯಸ್ಥರಾಗಿದ್ದ ಅಲೋಕ್​ ವರ್ಮಾ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಿರುವ ಬೆಳವಣಿಗೆಗೆ ಸಂಬಂಧಿಸಿದಂತೆ ಕೇಂದ್ರ ವಿಚಕ್ಷಣ ಆಯೋಗದ ವರದಿ ಮತ್ತು ಜ. 10 ರಂದು ಆಯ್ಕೆ ಸಮಿತಿಯ ಸಭೆಯ ವಿವರಗಳನ್ನು ಒಳಗೊಂಡಂತೆ ಮುಖ್ಯ ದಾಖಲೆಗಳನ್ನು ಬಹಿರಂಗಗೊಳಿಸುವಂತೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸಿಬಿಐ ಸ್ವತಂತ್ರ ನಿರ್ದೇಶಕರನ್ನು ಹೊಂದುವುದರಿಂದ ಕೇಂದ್ರ ಸರ್ಕಾರಕ್ಕೆ ಭಯ ಉಂಟಾಗಿರುವಂತೆ ಅದರ ನಡೆಯು ತೋರುತ್ತಿದೆ. ಕೇಂದ್ರವು ಈ ಕುರಿತಾದ ವರದಿಗಳನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರವು ಪಾರದರ್ಶಕವಾಗಿರಬೇಕು. ಇದರಿಂದಾಗಿ ಸಾರ್ವಜನಿಕರು ತಮ್ಮದೇ ತೀರ್ಮಾನಕ್ಕೆ ಬರಬಹುದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನೊಳಗೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಮೋದಿ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಅವರು ಅಲೋಕ್‌ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಮಾಡುವ ಕುರಿತು ತೀರ್ಮಾನ ತೆಗೆದುಕೊಂಡಿದ್ದರು.

ಅಲೋಕ್‌ ವರ್ಮಾ ಅವರ ವಿರುದ್ಧ ಇರುವ ಯಾವುದೇ ಭ್ರಷ್ಟಾಚಾರ ಆರೋಪಗಳಿಗೆ ಪ್ರಮುಖ ಪುರಾವೆಗಳು ಲಭ್ಯವಾಗಿಲ್ಲ. ಹಾಗಾಗಿ ವಿಚಕ್ಷಣ ಆಯೋಗದ ತನಿಖೆಯ ನೇತೃತ್ವ ವಹಿಸಿದ್ದ ನ್ಯಾಯಾಧೀಶ ಎ ಕೆ ಪಾಟ್ನಾಯಕ್‌ ಅವರನ್ನೊಳಗೊಂಡಂತೆ ಸಿವಿಸಿ ವರದಿಯನ್ನು ಸಾರ್ವಜನಿಕಗೊಳಿಸುವುದು ಅಗತ್ಯವಾಗಿದೆ ಎಂದು ಖರ್ಗೆ ಒತ್ತಾಯಿಸಿದ್ದಾರೆ.

ಆಯ್ಕೆ ಸಮಿತಿಯ ಸದಸ್ಯರು ಕಾನೂನು ಮತ್ತು ನ್ಯಾಯ ತತ್ತ್ವಗಳನ್ನು ಅನುಸರಿಸಬೇಕೆಂಬುದನ್ನು ಮನವರಿಕೆ ಮಾಡಲು ನಾನು ಪ್ರಯತ್ನಿಸಿದೆ. ಅಲೋಕ್​ ವರ್ಮಾ ಅವರ ಭ್ರಷ್ಟಾಚಾರ ಕುರಿತ ಸಿವಿಸಿ ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ನ್ಯಾಯಾಧೀಶರೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಹೇಳಿದ್ದರೂ ಕೂಡ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ನ್ಯಾಯಾಂಗಕ್ಕೇ ತೀವ್ರ ಕಿರಿಕಿರಿ ಉಂಟಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಅಲೋಕ್​ ವರ್ಮಾ ಅವರನ್ನು ವಜಾಗೊಳಿಸಿರುವುದು ಮತ್ತು ಮಧ್ಯಂತರ ಸಿಬಿಐ ನಿರ್ದೇಶಕರನ್ನಾಗಿ ಎಂ ನಾಗೇಶ್ವರ್‌ ರಾವ್‌ ಅವರ ನೇಮಕ ಮಾಡಿರುವುದು ಅಕ್ರಮ. ಹಾಗಾಗಿ, ಕೂಡಲೇ ಆಯ್ಕೆ ಸಮಿತಿಯ ಮತ್ತೊಂದು ಸಭೆ ಕರೆದು ಸಿಬಿಐಗೆ ಹೊಸ ನಿರ್ದೇಶಕರನ್ನು ನೇಮಕ ಮಾಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್)