ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಬಲವನ್ನಾಗಿಸಿ

ಹನೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಕಲೆಸವಾಗಿರುವುದರಿಂದ ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಪ್ರಬಲವನ್ನಾಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹನಮನರಸಯ್ಯ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರು ತಮ್ಮ ಹಕ್ಕನ್ನು ಚಲಾಯಿಸಬೇಕು. ಆ ಮೂಲಕ ಪ್ರತಿಯೊಂದು ಬೂತಿನಲ್ಲಿಯೂ ಶೇ.100 ಮತದಾನ ನಡೆಯುವಂತಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಜಾಗೃತಿ ಜಾಥಾ: ಇದಕ್ಕೂ ಮುನ್ನ ಜಾಗೃತಿ ಜಾಥಾಗೆ ಕೊಳ್ಳೇಗಾಲ ತಾಪಂ ಕಾರ್ಯನಿರ್ವಹಣಾಧಿಕಾರಿ ಉಮೇಶ್ ಚಾಲನೆ ನೀಡಿದರು. ಸುಮಾರು 25 ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಂಸಾಳೆ ನೃತ್ಯ, ಗೊರುಕನ ನೃತ್ಯ, ವೀರಗಾಸೆ ಕುಣಿತ ಕುಣಿತ, ವಾದ್ಯಮೇಳ, ಗಾರುಡಿ ಕುಣಿತ ಮೆರುಗು ನೀಡಿದವು.

ಮತದಾನ ನಿಮ್ಮ ಹಕ್ಕು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂಬ ನಾಮಫಲಕಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಹಿಡಿದು ಜಯಘೋಷ ಕೂಗಿದರು.

ಪಟ್ಟಣದ ಅಂಬೇಡ್ಕರ್ ಹಾಗೂ ಮುಖ್ಯ ರಸ್ತೆಗಳಲ್ಲಿ ವಾದ್ಯಮೇಳಕ್ಕೆ ತಕ್ಕಂತೆ ತಾಪಂ ಇಒ ಉಮೇಶ್, ಪಿಡಿಒಗಳು ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿದರು. ಆರ್‌ಎಂಸಿ ಪ್ರಾಂಗಣದಿಂದ ಪ್ರಾರಂಭವಾದ ಜಾಥಾ ಅಂಬೇಡ್ಕರ್ ವೃತ್ತ, ಪೆಟ್ರೋಲ್ ಬಂಕ್ ವೃತ್ತದಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಅಂತ್ಯಗೊಂಡಿತು.

ಮಾನವ ಸರಪಳಿ ರಚಿಸಿ ಪ್ರತಿಜ್ಞಾವಿಧಿ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ವಿವಿಧ ಇಲಾಖಾ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಮಾನವ ಸರಪಳಿ ರಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಬಳಿಕ ಕಲಾ ತಂಡದಿಂದ ನಾಟಕ ಪ್ರದರ್ಶಿಸಲಾಯಿತು. ಖಾಸಗಿ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಬೃಹತ್ ನಾಮಫಲಕಕ್ಕೆ ಸಹಿ ಹಾಕುವ ಮೂಲಕ ಮತದಾನ ಜಾಗೃತಿ ಸಹಿ ಸಂಗ್ರಹ ಮಾಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್ ಸ್ವಾಮಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್, ಗಂಗಾಧರ್, ಪಿಡಿಒಗಳಾದ ಸುರೇಶ್, ಕಿರಣ್, ಮಹದೇವಸ್ವಾಮಿ, ನಾಗರಾಜಮೂರ್ತಿ, ರಾಜೇಶ್, ಮಲ್ಲೇಶ್, ರಾಜು, ಮಹೇಶ್, ಸಿಆರ್‌ಪಿಗಳಾದ ಪ್ರೀತಮ್, ವೆಂಕಟರಾಜು, ಸತೀಶ್ ಹಾಜರಿದ್ದರು.