ಕುಶಾಲನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ 9ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಕುಶಾಲನಗರದಲ್ಲಿ ಸೋಮವಾರ ಜರುಗಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕಾವೇರಿ ಮಹಾ ಆರತಿ ಬಳಗದಿಂದ ಕುಶಾಲನಗರ ಪುರಸಭೆ, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ ಮಾತನಾಡಿ, ಸ್ವಚ್ಛತೆ ಪ್ರತಿಯೊಬ್ಬರ ಮನಸ್ಸು ಹಾಗೂ ಮನೆ ಮನೆಗಳಿಂದ ಆರಂಭವಾಗಬೇಕು. ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅರಿವು ಇರಬೇಕು. ಆ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ. ಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಜನ ಜಾನುವಾರುಗಳ ಜೀವ ಸೆಲೆಯಾಗಿರುವ ಕಾವೇರಿ ನದಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ಜತೆಗೆ 15 ವರ್ಷಗಳಿಂದ ನಿರಂತರ ಸ್ವಚ್ಛ ಕಾವೇರಿಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ ಕಳೆದ 9 ವರ್ಷಗಳಿಂದ ರಾಜ್ಯಾದ್ಯಂತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಪ್ರತೀ ಗ್ರಾಮಗಳಲ್ಲಿ ಸಂಸ್ಥೆ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಒಂದು ವಾರಗಳ ಕಾಲ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಹಾಗೂ ನದಿ ಪರಿಸರಗಳ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ. ನಮ್ಮ ನಡಿಗೆ ಶ್ರದ್ಧಾ ಕೇಂದ್ರ ಸ್ವಚ್ಛತೆಯೆಡೆಗೆ ಎನ್ನುವ ಘೋಷವಾಕ್ಯದೊಂದಿಗೆ ನಾಡಿನ ಎಲ್ಲ ಜನರ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯಕ್ರಮವನ್ನು ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮಾತನಾಡಿದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ಪಿ.ಗಣಪತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಎಂ.ಎನ್.ಚಂದ್ರಮೋಹನ್, ವಿ.ಡಿ .ಪುಂಡರಿಕಾಕ್ಷ, ಕೆ.ಎಸ್.ರಾಜಶೇಖರ್, ಪತ್ರಕರ್ತ ಎಚ್.ಎಂ. ರಘು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರೋಹಿತ್, ಮೇಲ್ವಿಚಾರಕರಾದ ಪೂರ್ಣಿಮಾ ಮತ್ತು ಯೋಜನೆಯ ಪ್ರತಿನಿಧಿಗಳು, ಕಾರ್ಯಕರ್ತರು ಇದ್ದರು.