ಹರಪನಹಳ್ಳಿ: ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ತುಂಗಾಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಕುಡಿಯಲು ನೀರು ಸಿಗುತ್ತಿಲ್ಲ ಎಂದು ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ್ ಹೇಳಿದರು. ಪುರಸಭೆ ಕಂದಾಯ ಅಧಿಕಾರಿ ಪ್ರಭುಗೆ ಮನವಿ ಸಲ್ಲಿಸಿ ಬುಧವಾರ ಮಾತನಾಡಿದರು.
ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ನಿತ್ಯ ಒಂದು ತಾಸಿಗೂ ಹೆಚ್ಚು ನೀರು ಪೂರೈಸಲಾಗುತ್ತಿದೆ. ಆದರೆ, ಅಂಬಳೇರ ಕಾಲನಿ, ಈಶ್ವರ ದೇವಸ್ಥಾನ, ಮೇಗಳಪೇಟೆ ಸುತ್ತಮುತ್ತ ಮಾತ್ರ ಅರ್ಧ ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. ಪುರಸಭೆ ಅಧಿಕಾರಿಗಳ ತಾರತಮ್ಯದಿಂದ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಾಲನಿ ನಿವಾಸಿಗಳು ನೀರು ಹಾಗೂ ಮನೆ ತೆರಿಗೆ ಪಾವತಿಸುವುದಿಲ್ಲ ಎಂದು ಎಚ್ಚರಿಸಿದರು.
ಪಟ್ಟಣದ ಹಲವಾರು ಕಾಲನಿಗಳಲ್ಲಿ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದು, ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಸಂತೋಷ್ ದೂರಿದರು.