ಕಾರ್ಮಿಕರಿಗೆ ವಾಹನ ವ್ಯವಸ್ಥೆ ಮಾಡಿ

ಹಾಸನ: ಕೆಲಸಕ್ಕಾಗಿ ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರಿಗೆ ಸಾರಿಗೆ ಇಲಾಖೆಯಿಂದ ವಾಹನ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾ ರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೂಚಿಸಿದರು.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಅವರು ಮಂಗಳವಾರ ವಿಡಿಯೋ ಸಂವಾದ ನಡೆಸಿದರು. ರಸ್ತೆ ಸುರಕ್ಷತೆ, ಸಾರ್ವಜನಿಕ ಸಾರಿಗೆ ಹಾಗೂ ಸರಕು ಸಾಗಣೆ ವಾಹನಗಳಿಗೆ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದರು.

ಬರ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಕುಡಿಯುವ ನೀರಿನ ಕಂಟ್ರೋಲ್ ರೂಮ್ ದಿನದ 24 ಗಂಟೆ ಕಾರ್ಯನಿರ್ವಹಿಸಬೇಕು. ನೀರಿನ ಸಮಸ್ಯೆ ಇದ್ದಲ್ಲಿ ವಿಳಂಬ ಮಾಡದೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ನೀರು ಪಡೆಯಬೇಕು. ಘನತ್ಯಾಜ್ಯ ವಿಲೇವಾರಿ ಬಗ್ಗೆ ನಿಗಾ ವಹಿಸಬೇಕು. ಮನೆ ಮನೆ ಕಸ ಸಂಗ್ರಹ, ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಅರ್ಜಿ ಮರುಪರಿಶೀಲಿಸಿ: ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಅರಣ್ಯ ಹಕ್ಕು ಕಾಯ್ದೆಯಡಿ ಬಂದ ಅರ್ಜಿಗಳ ವಿಲೇವಾರಿ ಪರಿಶೀಲಿಸಿ ತಿರಸ್ಕೃತ ಅರ್ಜಿಗಳನ್ನು ಮರು ಪರಿಶೀಲಿಸಬೇಕು. ಅರ್ಜಿ ತಿರಸ್ಕರಿಸುವ ವೇಳೆ ನೈಸರ್ಗಿಕ ಹಾಗೂ ಸಾಮಾಜಿಕ ನ್ಯಾಯ ಪತ್ರಗಳನ್ನು ಪರಿಶೀಲಿಸಲಾಗಿದೆಯೇ ಎಂಬು ದನ್ನು ಖಾತ್ರಿಪಡಿಸಿ ತಕ್ಷಣ ವರದಿ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಡಾ. ಕೆ.ಎನ್. ವಿಜಯ್‌ಪ್ರಕಾಶ್, ಎಸ್ಪಿ ಚೇತನ್‌ಸಿಂಗ್ ರಾಥೋರ್, ಎಡಿಸಿ ಎಂ.ಎಲ್. ವೈಶಾಲಿ ಇತರರು ಇದ್ದರು.